ಏಕದಿನ ಕ್ರಿಕೆಟ್‌ನಲ್ಲಿ ಸೆಹ್ವಾಗ್ ದ್ವಿಶತಕದ ಸಾಧನೆಗೆ 8 ವರ್ಷ

Update: 2019-12-08 18:31 GMT

ಇಂದೋರ್, ಡಿ.8: ಭಾರತದ ಮಾಜಿ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ದಾಖಲಿಸಿದ ಸಾಧನೆಗೆ 8 ವರ್ಷ ತುಂಬಿದೆ.

ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಡಿ.8 , 2011ರಂದು ಸೆಹ್ವಾಗ್ ವೆಸ್ಟ್‌ಇಂಡೀಸ್ ವಿರುದ್ಧ 4ನೇ ಡೇ ನೈಟ್ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 219 ರನ್ ಗಳಿಸಿದ್ದರು. ಅವರು 208 ನಿಮಿಷಗಳ ಬ್ಯಾಟಿಂಗ್‌ನಲ್ಲಿ 149 ಎಸೆತಗಳನ್ನು ಎದುರಿಸಿದ್ದರು. 25 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಲ್ಲಿ 219 ರನ್ ಗಳಿಸಿ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು.

ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಮೊದಲ ವಿಕೆಟ್‌ಗೆ 176 ರನ್‌ಗಳು, ಎರಡನೇ ವಿಕೆಟ್‌ಗೆ ಸೆಹ್ವಾಗ್ ಮತ್ತು ಸುರೇಶ್ ರೈನಾ 140 ರನ್‌ಗಳ ಜೊತೆಯಾಟ ನೀಡಿದ್ದರು. ಸೆಹ್ವಾಗ್ 69 ಎಸೆತಗಳಲ್ಲಿ (10ಬೌ, 5ಸಿ) ಶತಕ ಮತ್ತು 140 ಎಸೆತಗಳಲ್ಲಿ ದ್ವಿಶತಕ(23ಬೌ, 6ಸಿ) ಪೂರೈಸಿದ್ದರು.

ಸೆಹ್ವಾಗ್‌ರ ದ್ವಿಶತಕದ ನೆರವಿನಲ್ಲಿ ಭಾರತ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟದಲ್ಲಿ 418 ರನ್ ಗಳಿಸಿತ್ತು. ಈ ಪಂದ್ಯದಲ್ಲಿ ಭಾರತ 153 ರನ್ ಗಳಿಸಿತ್ತು.

ಸೆಹ್ವಾಗ್ ತನ್ನ ವೃತ್ತಿ ಬದುಕಿನಲ್ಲಿ 251 ಏಕದಿನ ಮತ್ತು 104 ಟೆಸ್ಟ್ ಆಡಿದ್ದಾರೆ. ಟೆಸ್ಟ್‌ನಲ್ಲಿ 23 ಶತಕ, 32 ಅರ್ಧಶತಕಗಳನ್ನು ಒಳಗೊಂಡ 8,586 ರನ್ , ಗರಿಷ್ಠ ವೈಯಕ್ತಿಕ ಸ್ಕೋರ್ 319 ರನ್ ಮತ್ತು 40 ವಿಕೆಟ್‌ಗಳನ್ನು ಪಡೆದಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ 15 ಶತಕ ಮತ್ತು 38 ಅರ್ಧಶತಕಗಳನ್ನು ಒಳಗೊಂಡ 8,283ರನ್, ಗರಿಷ್ಠ ವೈಯಕ್ತಿಕ ಸ್ಕೋರ್ 219 ರನ್ ಮತ್ತು 96 ವಿಕೆಟ್ ಜಮೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News