ಐಐಟಿಗೆ ಗುಡ್‌ಬೈ ಹೇಳಿದ ವಿದ್ಯಾಥಿಗಳೆಷ್ಟು ಗೊತ್ತೇ ?

Update: 2019-12-09 02:39 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಭಾರತದಲ್ಲಿ ಎಂಜಿನಿಯರಿಂಗ್ ಶಿಕ್ಷಣದ ಅತ್ಯುನ್ನತ ಕೇಂದ್ರಗಳೆನಿಸಿಕೊಂಡಿರುವ ಐಐಟಿಗಳಲ್ಲಿ ಕಳೆದ ಐದು ವರ್ಷದಲ್ಲಿ 7,248 ಮಂದಿ ಬಿಟೆಕ್ ಕೋರ್ಸ್‌ಗಳನ್ನು ಅರ್ಧಕ್ಕೆ ಬಿಟ್ಟಿರುವ ಅಂಶ ಬೆಳಕಿಗೆ ಬಂದಿದೆ.

ಭಾರಿ ಪ್ರಮಾಣದ ವಿದ್ಯಾರ್ಥಿಗಳು ಅತ್ಯುನ್ನತ ಸಂಸ್ಥೆಯಿಂದ ಅರ್ಧದಲ್ಲೇ ಹೊರನಡೆದಿರುವ ಅಂಕಿ ಅಂಶಗಳನ್ನು ಇತ್ತೀಚೆಗೆ ಮಾನವ ಸಂಪನ್ಮೂಲ ಸಚಿವಾಲಯ ಲೋಕಸಭೆಯಲ್ಲಿ ಪ್ರಕಟಿಸಿದೆ. ಐಐಟಿ ಹಾಗೂ ಐಐಐಟಿಗಳಿಂದ ವಿದ್ಯಾರ್ಥಿಗಳ ನಿರ್ಗಮನ ಅವಕಾಶ ಕಲ್ಪಿಸಿರುವ ಬಗ್ಗೆ ಹೇಳಿಕೆ ನೀಡುವ ವೇಳೆ ಈ ಅಂಕಿ ಅಂಶಗಳನ್ನು ಸಚಿವರು ನೀಡಿದ್ದಾರೆ.

ಈ ನಿರ್ಗಮನ ಅವಕಾಶದ ಅನ್ವಯ ಎರಡು ಸೆಮಿಸ್ಟರ್ ಮುಗಿದ ಬಳಿಕ ವಿದ್ಯಾರ್ಥಿಗಳು ಬಿಟೆಕ್‌ನಿಂದ ಬಿಎಸ್ಸಿಗೆ ಸೇರಲು ಅವಕಾಶ ಇರುತ್ತದೆ. ಆದರೆ ಐಐಐಟಿಗಳಲ್ಲಿ ಅರ್ಧಕ್ಕೆ ಕೋರ್ಸ್ ಬಿಟ್ಟವರ ಬಗೆಗಿನ ಅಂಕಿ ಅಂಶಗಳು ಲಭ್ಯವಿಲ್ಲ. ಶೈಕ್ಷಣಿಕ ಒತ್ತಡದಿಂದ ಕೋರ್ಸ್ ಬದಲಾಯಿಸಿಕೊಳ್ಳುವ ಅವಕಾಶ ನೀಡಲು ಐಐಟಿಗಳು ಹಿಂದೇಟು ಹಾಕುತ್ತಿವೆ ಎನ್ನಲಾಗಿದೆ.

ಪ್ರಸ್ತಾವಿತ ನಿರ್ಗಮನ ಅವಕಾಶದ ಬಗ್ಗೆ ಐಐಟಿಗಳು ಸ್ವತಂತ್ರ ನಿರ್ಧಾರ ಕೈಗೊಳ್ಳಲು ಐಐಟಿ ಮಂಡಳಿ ಇತ್ತೀಚೆಗೆ ಅನುವು ಮಾಡಿಕೊಟ್ಟಿತ್ತು. ಆ ಬಳಿಕ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸಮನ್ವಯ ವೇದಿಕೆಯ ಸಭೆಯಲ್ಲಿ ಅಕ್ಟೋಬರ್ 16ರಂದು ಇದಕ್ಕೆ ಅನುಮೋದನೆ ನೀಡಲಾಯಿತು. ಇದನ್ನು ಅನುಷ್ಠಾನಗೊಳಿಸುವ ವಿಧಿವಿಧಾನಗಳ ಬಗ್ಗೆ ಆಯಾ ಐಐಟಿ ಆಡಳಿತ ಮಂಡಳಿಗಳು ನಿರ್ಧಾರ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ದೇಶದಲ್ಲಿ ಒಟ್ಟು 24 ಐಐಟಿಗಳಿದ್ದು, ಈ ಪೈಕಿ 19, ಸರ್ಕಾರಿ- ಖಾಸಗಿ ಪಾಲುದಾರಿಕೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News