ಬಿಕರ್ನಕಟ್ಟೆ ಸರಕಾರಿ ಆಂಗ್ಲ ಮಾಧ್ಯಮ ಶಾಲೆಯಿಂದ ಖಾಸಗಿ ಶಾಲೆಗಳಿಗೆ ಸಡ್ಡು

Update: 2019-12-09 06:16 GMT

ಮಂಗಳೂರು, ಡಿ.8: ಮಂಗಳೂರು ನಗರದ ದಕ್ಷಿಣ ವಲಯದ ಪದವು ಬಿಕರ್ನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭವಾಗಿದ್ದು, ಇಲ್ಲಿನ ಸೌಲಭ್ಯಗಳು ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವಂತಿದೆ.

ಬಿಕರ್ನಕಟ್ಟೆ ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಸಂಘ-ಸಂಸ್ಥೆಗಳು ಹಲವು ಸೌಲಭ್ಯಗಳನ್ನು ನೀಡುತ್ತಾ ಬರುತ್ತಿವೆ. ಸಣ್ಣಪುಟ್ಟ ಸಮಸ್ಯೆ ಹೊರತುಪಡಿಸಿದರೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಹ ವಾತಾವರಣ ಇಲ್ಲಿರುವುದು ಸ್ಪಷ್ಟ.

ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ವಿಜಯಪುರ, ಗದಗ, ಕೊಪ್ಪಳ ಸೇರಿದಂತೆ ವಿವಿಧೆಡೆಯಿಂದ ಮಂಗಳೂರಿಗೆ ಹೊಟ್ಟೆ ಪಾಡಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ವಲಸೆ ಬರುತ್ತಾರೆ. ಅಂಥವರು ಇಲ್ಲಿಯೇ ಎರಡು-ಮೂರು ವರ್ಷಗಳ ಕಾಲ ಬೀಡುಬಿಟ್ಟಿರುತ್ತಾರೆ. ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸಬೇಕು ಎನ್ನುವ ಹಂಬಲವೇ ಅಧಿಕ. ಬಡಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣದ ಸೌಲಭ್ಯ ಇಲ್ಲಿ ದೊರೆಯುತ್ತಿದೆ.

ಇಂಗ್ಲಿಷ್ ಶಿಕ್ಷಣ ನೀಡುವ ಕಾನ್ವೆಂಟ್, ಖಾಸಗಿ ಶಾಲೆಗಳಲ್ಲಿ ದುಬಾರಿ ಹಣ ನೀಡಿ ಮಕ್ಕಳಿಗೆ ಶಿಕ್ಷಣ ಕೊಡಿಸಲಾಗದ ಜನರು ಸರಕಾರಿ ಶಾಲೆಯಲ್ಲಿ 1ನೇ ತರಗತಿಯಿಂದ ಆರಂಭವಾಗುವ ಆಂಗ್ಲ ಮಾಧ್ಯಮ ಶಾಲೆಯಲ್ಲಿನ ಸೌಲಭ್ಯ ಬಳಸಿಕೊಳ್ಳುತ್ತಿದ್ದಾರೆ.

ಪ್ರಸಕ್ತ 2019-20ನೇ ಸಾಲಿನಿಂದ ಸರಕಾರಿ ಶಾಲೆಯ 1ನೇ ತರಗತಿಯಲ್ಲಿ ಆರಂಭವಾಗುತ್ತಿರುವ ಆಂಗ್ಲ ಮಾಧ್ಯಮ ತರಗತಿಗೆ ಕೇವಲ 30 ಮಕ್ಕಳ ದಾಖಲಾತಿ ಮಾಡಿಕೊಳ್ಳಬೇಕೆಂದು ರಾಜ್ಯ ಯೋಜನಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಬಿಕರ್ನಕಟ್ಟೆ ಶಾಲೆಯಲ್ಲಿ 31 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಪೈಕಿ 16 ಬಾಲಕಿಯರು, 15 ಬಾಲಕರು ಆಂಗ್ಲ ಶಿಕ್ಷಣ ಸೌಲಭ್ಯದ ಫಲಾನುಭವಿಗಳಾಗಿದ್ದಾರೆ. ಈ ಮಕ್ಕಳಿಗೆ ಓರ್ವ ಶಿಕ್ಷಕಿಯನ್ನು ನಿಯೋಜಿಸಲಾಗಿದೆ.

ರಾಜ್ಯ ಸರಕಾರವು ಮಕ್ಕಳಿಗೆ ಒಂದು ಕನ್ನಡ ಪುಸ್ತಕ, ಐದು ಇಂಗ್ಲಿಷ್ ಪುಸ್ತಕಗಳನ್ನು ವಿತರಿಸುತ್ತಿದೆ. ಬೆಳಗ್ಗಿನ ಉಪಾಹಾರ, ಹಾಲು, ಶೂ, ಎರಡು ಜೊತೆ ಸಾಕ್ಸ್, ಸಮವಸ್ತ್ರ ನೀಡಲಾಗುತ್ತಿದೆ. ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ನೀಡುವ ಬಗ್ಗೆ ಸರಕಾರ ಯೋಜಿಸುತ್ತಿದ್ದು, ಮುಂದಿನ ದಿನಗಳಲ್ಲಿ ವಿತರಿಸುವ ಸಾಧ್ಯತೆ ಇದೆ.

ಶಾಲಾಭಿವೃದ್ಧಿ ಸಮಿತಿ, ಶಾಲಾ ಹಳೆ ವಿದ್ಯಾರ್ಥಿ ಸಂಘ, ಎಸ್‌ಡಿಎಂಸಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ವರ್ಷವಿಡೀ ನೋಟ್‌ಬುಕ್, ಬ್ಯಾಗ್, ಚಪ್ಪಲಿ, ಕೊಡೆ, ಹೇರ್ ಕಟಿಂಗ್, ನೃತ್ಯ, ಗಿಟಾರ್, ಕೀಬೋರ್ಡ್ ತರಬೇತಿ ಸೌಲಭ್ಯ ಕಲ್ಪಿಸುತ್ತಿವೆ. ನಿವೃತ್ತ ಶಿಕ್ಷಕ ಮನೋಹರ್ ಪ್ರಸಾದ್ ವಾರಕ್ಕೆ ನಾಲ್ಕು ದಿನ ಮಕ್ಕಳಿಗೆ ಇಂಗ್ಲಿಷ್ ಸ್ಪೋಕನ್ ಕ್ಲಾಸೆಸ್‌ನ್ನು ಉಚಿತವಾಗಿ ಹೇಳಿಕೊಡುತ್ತಿದ್ದಾರೆ. ಅಲ್ಲದೆ, ಗರೋಡಿ ಸ್ಟೀಲ್ಸ್ ಕಂಪೆನಿಯು ಮಕ್ಕಳಿಗೆ ಶುದ್ಧ ಕುಡಿಯುವ ನೀರಿಗಾಗಿ ‘ಅಕ್ವ ಗಾರ್ಡ್’ ವ್ಯವಸ್ಥೆ ಕಲ್ಪಿಸಿದೆ.

‘ನಮ್ಮ ಶಾಲೆಯಲ್ಲಿ ದಾಖಲಾಗುವ ಬಹುತೇಕ ವಿದ್ಯಾರ್ಥಿಗಳು ವಲಸೆ ಬಂದವರು. ಉತ್ತರ ಕರ್ನಾಟಕದಿಂದ ನಗರಕ್ಕೆ ಬಂದು ದುಡಿಯುವವರು ತಮ್ಮ ಮಕ್ಕಳನ್ನು ಇಲ್ಲಿ ದಾಖಲಿಸುತ್ತಾರೆ. ಊರಿಗೆ ವಾಪಸಾಗುವಾಗ ದಾಖಲಾತಿ ಪ್ರಮಾಣಪತ್ರದೊಂದಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಾರೆ. ದಾಖಲಾದ ಬಹುತೇಕ ವಿದ್ಯಾರ್ಥಿಗಳು ಒಂದೇ ವರ್ಷದಲ್ಲಿ ನಿರ್ಗಮಿಸುತ್ತಾರೆ ಎನ್ನುವುದು ಬೇಸರದ ಸಂಗತಿ. ಅಷ್ಟೇ ಸಂಖ್ಯೆಯ ವಿದ್ಯಾರ್ಥಿಗಳನ್ನು ಪುನಃ ಕ್ರೋಡೀಕರಿಸುವುದು ಸವಾಲಿನ ಕೆಲಸ’ ಎಂದು ಮುಖ್ಯೋಪಾಧ್ಯಾಯಿನಿ ರಾಜೀವಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ವಾಹನ ವ್ಯವಸ್ಥೆ: ದೂರದ ಪ್ರದೇಶಗಳಾದ ಮೇರ್ಲಪದವು, ನೀರುಮಾರ್ಗ, ಶಕ್ತಿನಗರ ಸೇರಿದಂತೆ ನಗರದ ವಿವಿಧೆಡೆಯಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ವಿಶೇಷ ವಾಹನ ಸೌಕರ್ಯ ಕಲ್ಪಿಸಲಾಗಿದೆ. ಮಕ್ಕಳನ್ನು ಕರೆತಂದು ಪುನಃ ಮನೆಗೆ ಬಿಡಲು ಮೂರು ವಾಹನಗಳನ್ನು ನಿಯೋಜಿಸಲಾಗಿದೆ. ವಾಹನ ಬಾಡಿಗೆಗೆ ಪ್ರತಿ ತಿಂಗಳು 22,000 ರೂ. ಪಾವತಿಸಲು ಸಾಧ್ಯವಾಗುತ್ತಿಲ್ಲ. ವಾಹನ ವ್ಯವಸ್ಥೆಗೆ ಅನುದಾನವಿಲ್ಲ ಎನ್ನುವುದನ್ನು ಹೊರತುಪಡಿಸಿದರೆ ಮಕ್ಕಳಿಗೆ ಎಲ್ಲ ಸೌಕರ್ಯ ನೀಡಲಾಗುತ್ತಿದೆ ಎನ್ನುತ್ತಾರೆ ಮುಖ್ಯೋಪಾಧ್ಯಾಯಿನಿ ರಾಜೀವಿ.

ಶಾಲೆಯ ಸೌಲಭ್ಯಗಳು

►ಪ್ರಾಜೆಕ್ಟರ್ ಮೂಲಕ ಪಾಠ ಬೋಧನೆ

►ದೂರದ ಮಕ್ಕಳಿಗೆ ಉಚಿತ ವಾಹನ ವ್ಯವಸ್ಥೆ.

►ಸಮವಸ್ತ್ರ, ಬಿಸಿಯೂಟ, ನೋಟ್‌ಬುಕ್, ಬ್ಯಾಗ್, ಕೊಡೆ, ಶೂ, ಸ್ಯಾಂಡಲ್ಸ್ ವ್ಯವಸ್ಥೆ.

►ನೃತ್ಯ, ಗಿಟಾರ್, ಕೀಬೋರ್ಡ್ ತರಬೇತಿ.

►ವರ್ಷಪೂರ್ತಿ ಉಚಿತ ಹೇರ್ ಕಟಿಂಗ್.

ದಾನಿಗಳಿಗೆ ಆಹ್ವಾನ

ಆರ್ಥಿಕವಾಗಿ ಹಿಂದುಳಿದ, ಬಡತನದ ಹಿನ್ನೆಲೆಯ ವಲಸೆ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಪೀಠೋಪಕರಣ, ಶಾಲೆಯ ಕಟ್ಟಡ ಅಭಿವೃದ್ಧಿ, ದೂರದಿಂದ ಬರುವ ಮಕ್ಕಳ ವಾಹನ ವ್ಯವಸ್ಥೆಗೆ ಸಾವಿರಾರು ರೂ. ಅಗತ್ಯವಿದೆ. ಆರ್ಥಿಕ ಸಹಾಯ ಕಲ್ಪಿಸುವುದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದಂತಾಗುತ್ತದೆ. ದಾನಿಗಳು ಇದ್ದಲ್ಲಿ ಪದವು ಬಿಕರ್ನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರಾಜೀವಿ (9480155919) ಅವರನ್ನು ಸಂಪರ್ಕಿಸಿ ಶಾಲಾಭಿವೃದ್ಧಿಗೆ ಕೊಡುಗೆ ನೀಡಬಹುದಾಗಿದೆ.

ಬಿಕರ್ನಕಟ್ಟೆ ಶಾಲೆಯ ಸುತ್ತಮುತ್ತಲೂ ಖಾಸಗಿ ಶಾಲೆಗಳ ಆರ್ಭಟವೇ ಹೆಚ್ಚಿದೆ. ಇಂತಹ ಪೈಪೋಟಿ ನಡುವೆಯೂ ಈ ಶಾಲೆಯಲ್ಲಿ ಉತ್ತಮ ಫಲಿತಾಂಶ ದಾಖಲಾಗುತ್ತಿದೆ. ಶಾಲೆಯಲ್ಲಿ ಅಂಗನವಾಡಿಯನ್ನೂ ಆರಂಭಿಸಲಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆಯನ್ನು ಮುಂದಿನ ವರ್ಷ 200ಕ್ಕೇರಿಸುವ ಉದ್ದೇಶವಿದೆ.

-ರಾಜೀವಿ, ಮುಖ್ಯ ಶಿಕ್ಷಕಿ,

ಪದವು ಬಿಕರ್ನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭವಾಗಿರುವುದು ಖುಷಿಯ ವಿಚಾರ. ಶಿಕ್ಷಕರು, ಹಳೆ ವಿದ್ಯಾರ್ಥಿ ಸಂಘ ಹಾಗೂ ಎಸ್‌ಡಿಎಂಸಿ ನಡುವೆ ಉತ್ತಮ ಸಂವಹನವಿದೆ. ಮಕ್ಕಳಿಗೆ ಪೀಠೋಪಕರಣ ವ್ಯವಸ್ಥೆ ಅಗತ್ಯ ಇದ್ದು, ದಾನಿಗಳ ಹುಡುಕಾಟದಲ್ಲಿದ್ದೇವೆ. ಶೀಘ್ರದಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು.

-ಜಯಲತಾ ಅಮಿನ್,

ಎಸ್‌ಡಿಎಂಸಿ ಅಧ್ಯಕ್ಷೆ

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News