ಹಿಂದೂ-ಮುಸ್ಲಿಮರ ಅಗೋಚರ ವಿಭಜನೆಗೆ ಕೇಂದ್ರದ ಯತ್ನ : ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಶಿವಸೇನೆ ಟೀಕೆ

Update: 2019-12-19 06:50 GMT
ಉದ್ಧವ್ ಠಾಕ್ರೆ

ಮುಂಬೈ : ಪೌರತ್ವ ತಿದ್ದುಪಡೆ ಕಾಯ್ದೆಯ ಮೂಲಕ ಕೇಂದ್ರ ಸರಕಾರ ಹಿಂದೂಗಳು ಹಾಗೂ ಮುಸ್ಲಿಮರ 'ಅಗೋಚರ ವಿಭಜನೆಗೆ' ಯತ್ನಿಸುತ್ತಿದೆ ಎಂದು ಬಿಜೆಪಿಯ ಮಾಜಿ ಮಿತ್ರ ಪಕ್ಷ ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆದಿದೆ.

ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಹಿನ್ನೆಲೆಯಲ್ಲಿ ಸೇನೆಯ ಈ ಹೇಳಿಕೆ ಮಹತ್ವ ಪಡೆದಿದೆ. ಈ ರೀತಿಯಾಗಿ ಹಿಂದೂ ಅಕ್ರಮ ವಲಸಿಗರನ್ನು ಆಯ್ದು ಅವರಿಗೆ ಮಾತ್ರ ಪೌರತ್ವ ನೀಡುವುದು ದೇಶದಲ್ಲಿ ಧಾರ್ಮಿಕ ಯುದ್ಧಕ್ಕೆ ಆಸ್ಪದ ನೀಡುವ ಆತಂಕವನ್ನೂ ಸೇನೆ ವ್ಯಕ್ತಪಡಿಸಿದೆ.

ಈ ಮಸೂದೆಯ ಹೆಸರಿನಲ್ಲಿ ಮತ ಬ್ಯಾಂಕ್ ರಾಜಕಾರಣ ಮಾಡುವುದು ದೇಶದ ಹಿತಾಸಕ್ತಿಯಲಿಲ್ಲ ಎಂದು ಹೇಳಿದ ಶಿವಸೇನೆ, ''ಈ ದೇಶದಲ್ಲಿ ಈಗ ಸಮಸ್ಯೆಗಳಿಗೆ ಕೊರತೆಯಿಲ್ಲದೇ ಇರುವಾಗ ಈ ಮಸೂದೆ ಮಂಡನೆಯಂತಹ ಕ್ರಮಗಳ ಮೂಲಕ ಹೊಸ ಸಮಸ್ಯೆಗಳನ್ನು ಆಹ್ವಾನಿಸುತ್ತಿದ್ದೇವೆ, ಈ ಮಸೂದೆಯ ವಿಚಾರದಲ್ಲಿ ಕೇಂದ್ರವು ಹಿಂದೂಗಳು ಹಾಗೂ ಮುಸ್ಲಿಮರ ಅಗೋಚರ ವಿಭಜನೆ ಮಾಡಿದಂತೆ ಕಾಣಿಸುತ್ತದೆ'' ಎಂದು ಸಾಮ್ನಾ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಈಶಾನ್ಯ ಭಾರತದ ಹೆಚ್ಚಿನ  ರಾಜ್ಯಗಳು ಹಾಗೂ ಬಿಜೆಪಿಯು ಜೆಡಿಯು ಜತೆ ಮೈತ್ರಿ ಮಾಡಿಕೊಂಡಿರುವ ಬಿಹಾರ ಕೂಡ ಈ ಮಸೂದೆಯನ್ನು ವಿರೋಧಿಸುತ್ತಿದೆ ಎಂದು ಲೋಕಸಭೆಯಲ್ಲಿ 18 ಸದಸ್ಯರ ಬಲ ಹೊಂದಿರುವ ಶಿವಸೇನೆ ಹೇಳಿದೆ.

ಪಾಕಿಸ್ತಾನ ವಿರುದ್ಧ ಕಠಿಣ ನಿಲುವು ತಳೆದಂತೆ ಹಿಂದೂಗಳ ಮೇಲೆ ದೌರ್ಜನ್ಯವೆಸಗುವ ಕೆಲ ನೆರೆಯ ರಾಷ್ಟ್ರಗಳ ವಿರುದ್ಧವೂ ಕಠಿಣ ಕ್ರಮಕ್ಕೆ ಮುಂದಾಗುವಂತೆಯೂ ಶಿವಸೇನೆ ಪ್ರಧಾನಿಯನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News