ತೆಲಂಗಾಣ: ಎನ್‌ಕೌಂಟರ್ ಪ್ರಕರಣದ ತನಿಖೆಗೆ ವಿಶೇಷ ತಂಡದ ರಚನೆ

Update: 2019-12-09 14:48 GMT
Photo: PTI

ಹೈದರಾಬಾದ್, ಡಿ.9: ಪಶುವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿರುವ ಪ್ರಕರಣದ ಬಗ್ಗೆ ತನಿಖೆ ನಡೆಸಲು ತೆಲಂಗಾಣ ಸರಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ.

ಈ ಬಗ್ಗೆ ಸರಕಾರ ರವಿವಾರ ಆದೇಶ ಹೊರಡಿಸಿದೆ. ನಾಲ್ವರು ವ್ಯಕ್ತಿಗಳ ಹತ್ಯೆಗೆ ಕಾರಣ ಮತ್ತು ಸನ್ನಿವೇಶವನ್ನು ಕಂಡುಹಿಡಿಯಲು ಮತ್ತು ವಾಸ್ತವಾಂಶವನ್ನು ದೃಢಪಡಿಸಲು ನಿರಂತರ ಮತ್ತು ಕೇಂದ್ರೀಕೃತ ತನಿಖೆ ಅಗತ್ಯವಿದೆ . ಆದ್ದರಿಂದ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಎಂ ಭಾಗ್ವತ್ ನೇತೃತ್ವದ ವಿಶೇಷ ತನಿಖಾ ತಂಡ ತಕ್ಷಣದಿಂದಲೇ ತನಿಖಾ ಕಾರ್ಯ ಕೈಗೆತ್ತಿಕೊಳ್ಳಬೇಕು . ತನಿಖೆಯನ್ನು ಪೂರ್ಣಗೊಳಿಸಿ ಸಕ್ರಮ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶ ತಿಳಿಸಿದೆ.

   ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಸುಟ್ಟುಹಾಕಿದ ಆರೋಪದಲ್ಲಿ ನಾಲ್ವರನ್ನು ನವೆಂಬರ್ 29ರಂದು ಪೊಲೀಸರು ಬಂಧಿಸಿದ್ದರು. ವಿಚಾರಣೆಯ ಅಂಗವಾಗಿ ಡಿ.6ರ ಮುಂಜಾನೆ ಆರೋಪಿಗಳನ್ನು ಕೃತ್ಯ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾಗ ಅವರು ಪೊಲೀಸರ ಕೈಯಲ್ಲಿದ್ದ ಗನ್ ಕಿತ್ತುಕೊಂಡು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಪೊಲೀಸರು ರಕ್ಷಣೆಗಾಗಿ ಗುಂಡು ಹಾರಿಸಿ ನಾಲ್ವರು ಆರೋಪಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿಕೆ ನೀಡಿದ್ದರು.

ಪೊಲೀಸ್ ಎನ್‌ಕೌಂಟರ್‌ನ ಪರ-ವಿರೋಧ ಚರ್ಚೆ ನಡೆಯುತ್ತಿರುವಂತೆಯೇ , ರಾಷ್ಟ್ರೀಯ ಮಾನವ ಹಕ್ಕು ಆಯೋಗ ಪ್ರಕರಣದ ತನಿಖೆಗೆ 7 ಸದಸ್ಯರ ತನಿಖಾ ಸಮಿತಿಯನ್ನು ನೇಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News