×
Ad

ಈಸ್ ಆಫ್ ಡೂಯಿಂಗ್ ಬಿಸಿನೆಸ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಸುಧಾರಣೆ: ನ್ಯೂಝಿಲ್ಯಾಂಡ್ ತಂಡದಿಂದ ಕಾರ್ಯಾಗಾರ ಆಯೋಜನೆ

Update: 2019-12-09 23:17 IST

ಬೆಂಗಳೂರು, ಡಿ.9: ಈಸ್ ಆಫ್ ಡೂಯಿಂಗ್ ಬಿಸಿನೆಸ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಅಲಂಕರಿಸಿರುವ ನ್ಯೂಝಿಲ್ಯಾಂಡ್ ದೇಶ, ಭಾರತದ ರ‍್ಯಾಂಕಿಂಗ್‌ ಹೆಚ್ಚಿಸಿಕೊಳ್ಳಲು ಏನೆಲ್ಲಾ ಕ್ರಮ ಅನುಸರಿಸಬೇಕು ಎಂಬುದರ ಕುರಿತು ಬೆಂಗಳೂರಿನಲ್ಲಿ ಇಂದಿನಿಂದ ಐದು ದಿನಗಳ ಕಾಲ ಕಾರ್ಯಾಗಾರ ನಡೆಸುತ್ತಿದೆ.

ಖನಿಜ ಭವನದಲ್ಲಿರುವ ಉದ್ಯೋಗ ಮಿತ್ರ ಸಭಾಂಗಣದಲ್ಲಿ ನಡೆಯುತ್ತಿರುವ ಈ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಸರಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಭಾರತದ ಈಸ್ ಆಫ್ ಡೂಯಿಂಗ್ ಬಿಸಿನೆಸ್ ವಿಶ್ವ ರ‍್ಯಾಂಕಿಂಗ್‌ ನೀಡುವಲ್ಲಿ ದಿಲ್ಲಿ, ಮುಂಬೈ ನಗರದ ಜೊತೆಗೆ ಈ ಬಾರಿ ಬೆಂಗಳೂರು ಹಾಗೂ ಕೊಲ್ಕತ್ತ ಕೂಡ ಆಯ್ಕೆಯಾಗಿದೆ ಎಂದರು.

ಭಾರತ ಈಸ್ ಆಫ್ ಡೂಯಿಂಗ್ ಬಿಸಿನೆಸ್‌ನಲ್ಲಿ ಅಗ್ರ 50ರ ಪಟ್ಟಿಯಲ್ಲಿ ಬರುವ ಇಂಗಿತ ಹೊಂದಿದ್ದು, ಈ ನಿಟ್ಟಿನಲ್ಲಿ ಬೆಂಗಳೂರಿನ ಕೊಡುಗೆ ದೊಡ್ಡದಿರಬೇಕು. ವಿಶ್ವ ರ‍್ಯಾಂಕಿಂಗ್‌ನಲ್ಲಿ ನ್ಯೂಝಿಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಹೀಗಾಗಿ ತಮ್ಮಲ್ಲಿರುವ ಸೇವೆ ಹಾಗೂ ವ್ಯವಸ್ಥೆ ಬಗ್ಗೆ ನಮಗೂ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಕ್ಕೆ ಅವರ ತಂಡ ಇಲ್ಲಿಗೆ ಆಗಮಿಸಿ ನಮ್ಮ ಇಲಾಖಾ ಅಧಿಕಾರಿಗಳಿಗೆ ಕಾರ್ಯಾಗಾರ ನಡೆಸಲು ಮುಂದಾಗಿದ್ದಾರೆ ಎಂದು ಅವರು ಹೇಳಿದರು. ಐದು ದಿನಗಳ ಕಾಲ ನಡೆಯಲಿರುವ ಕಾರ್ಯಾಗಾರವನ್ನು ಅಧಿಕಾರಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಬಳಿಕ ನ್ಯೂಝಿಲ್ಯಾಂಡ್‌ಗೆ ತೆರಳಿ ಅಲ್ಲಿ ಈಸ್ ಆಫ್ ಡೂಯಿಂಗ್ ಬಿಸಿನೆಸ್ ಅನ್ನು ಯಾವ ರೀತಿ ಜಾರಿಗೆ ತಂದಿದ್ದಾರೆ, ಅಲ್ಲಿಯ ಪಾರದರ್ಶಕತೆ ಬಗ್ಗೆಯೂ ನಮ್ಮ ಅಧಿಕಾರಿಗಳು ಅಧ್ಯಯನ ಮಾಡಬೇಕಿದೆ. ಹೀಗಾಗಿ ಐದು ದಿನದ ಕಾರ್ಯಗಾರದಲ್ಲಿ ಜಾಗರೂಕರಾಗಿ ಭಾಗವಹಿಸಿ ಮಾಹಿತಿ ಪಡೆದುಕೊಳ್ಳಿ ಎಂದು ವಿಜಯಭಾಸ್ಕರ್ ಕಿವಿ ಮಾತು ಹೇಳಿದರು.

ರಾಜ್ಯ ಸರಕಾರ ಸುಮಾರು 500 ಸೇವೆಗಳನ್ನು ಸಕಾಲ ಮೂಲಕ ಆನ್‌ಲೈನ್ ವ್ಯಾಪ್ತಿಗೆ ತಂದಿದೆ. ಕಾಗದ ರಹಿತ ಸೇವೆ ಹಾಗೂ ಕಚೇರಿಗೆ ಅಲೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಕಾಲ ಯೋಜನೆ ತರಲಾಗಿದೆ. ಆದರೆ ಆನ್‌ಲೈನ್‌ಗೆ ತಂದ ಕೆಲ ಸೇವೆಗಳ ಬಗ್ಗೆ ಅರಿವಿನ ಕೊರತೆಯಿಂದ ಕೆಲ ಸೇವೆಗಳು ಬಳಕೆಯಾಗುತ್ತಿಲ್ಲ. ಹೀಗಾಗಿ ಈಸ್ ಆಫ್ ಡೂಯಿಂಗ್ ಬಿಸಿನೆಸ್‌ಗೆ ಸಂಬಂಧ ಪಡುವ ಆನ್‌ಲೈನ್ ಸೇವೆಗಳ ಬಗ್ಗೆ ಮಾಹಿತಿ ನೀಡಲು ವಾಟ್ಸಪ್ ಗ್ರೂಪ್ ತೆರೆಯುವಂತೆ ಅವರು ಸಲಹೆ ನೀಡಿದರು. ಸಣ್ಣ, ಮಧ್ಯಮ ಮತ್ತು ಬಹತ್ ಕೈಗಾರಿಕೋದ್ಯಮದಲ್ಲಿ ಇರುವವರನ್ನು ಈ ಗ್ರೂಪ್‌ಗೆ ಸೇರಿಸಿ, ಆನ್‌ಲೈನ್ ವ್ಯಾಪ್ತಿಯಲ್ಲಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಿ. ಜೊತೆಗೆ ಟ್ವಿಟರ್ ಮೂಲಕವೂ ಅರಿವು ನೀಡಿ ಎಂದು ವಿಜಯಭಾಸ್ಕರ್ ಹೇಳಿದರು.

ಐದು ದಿನದ ಈ ಕಾರ್ಯಾಗಾರದಲ್ಲಿ ಈಸ್ ಆಫ್ ಡೂಯಿಂಗ್ ಬಿಸಿನೆಸ್‌ನಲ್ಲಿ ಪಾರದರ್ಶಕತೆ, ಸುಲಭ ರೀತಿಯಲ್ಲಿ ಬಿಸಿನೆಸ್ ತೆರೆಯಲು ತೆಗೆದುಕೊಳ್ಳಬೇಕಾದ ಕ್ರಮ ಹಾಗೂ ಪ್ರಸ್ತುತ ಈಗಿರುವ ಸಮಸ್ಯೆ, ಅದಕ್ಕೆ ಪರಿಹಾರಗಳ ಬಗ್ಗೆ ಕಾರ್ಯಾಗಾರದ ಮೂಲಕ ಉತ್ತರ ಪಡೆದುಕೊಳ್ಳಿ ಎಂದು ಅವರು ತಿಳಿಸಿದರು. ಪ್ರಮುಖವಾಗಿ ಆಸ್ತಿಗಳ ನೋಂದಣಿ, ವ್ಯವಹಾರ ಪ್ರಾರಂಭ, ವಿದ್ಯುತ್ ಇತರೆ ಸೇವೆಗಳಲ್ಲಿ ಇರುವ ತೊಡಕುಗಳನ್ನು ಪರಿಹರಿಸಿಕೊಳ್ಳುವ ಬಗ್ಗೆ ಹೆಚ್ಚು ಗಮನ ಹರಿಸಿ. ಬೆಂಗಳೂರು ಈಸ್ ಆಫ್ ಡೂಯಿಂಗ್ ಬಿಸಿನೆಸ್‌ನಲ್ಲಿ ಮೊದಲ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕು. ಈಸ್ ಆಫ್ ಡೂಯಿಂಗ್ ಬಿಸಿನೆಸ್ ಉತ್ತಮಗೊಂಡರೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಕಾಣಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಈಸ್ ಆಫ್ ಡೂಯಿಂಗ್ ಬಿಸಿನೆಸ್ ಸಂಬಂಧಿಸಿದಂತೆ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ನಮ್ಮ ರಾಜ್ಯವೂ ಭಾಗವಹಿಸುತ್ತಿದೆ ಎಂದು ವಿಜಯಭಾಸ್ಕರ್ ತಿಳಿಸಿದರು.

ಐದು ದಿನದ ಕಾರ್ಯಾಗಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಬೆಸ್ಕಾಂ, ಬಿಬಿಎಂಪಿ, ಕೆಐಇಡಿಬಿ, ಕಂದಾಯ ಇಲಾಖೆ ಸೇರಿದಂತೆ ಈಸ್ ಆಫ್ ಡೂಯಿಂಗ್ ಬಿಸಿನೆಸ್ ವ್ಯಾಪ್ತಿಗೆ ಬರುವ ಒಟ್ಟು 9 ಇಲಾಖೆಯ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದರು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News