ಅಸಂಘಟಿತ ನೌಕರರ ಸಾಮಾಜಿಕ ಭದ್ರತೆಗೆ ಯೋಜನೆ: ಸಚಿವ ಸುರೇಶ್ ಕುಮಾರ್

Update: 2019-12-09 17:55 GMT

ಬೆಂಗಳೂರು, ಡಿ.9: ರಾಜ್ಯದಲ್ಲಿನ ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಸಮಗ್ರ ಯೋಜನೆ ರೂಪಿಸಲು ಶೀಘ್ರದಲ್ಲಿಯೇ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆ ನಡೆಸಲಾಗುವುದು ಎಂದು ಕಾರ್ಮಿಕ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ಸೋಮವಾರ ನಗರದ ವಿಧಾನಸೌಧದಲ್ಲಿ ಕಾರ್ಮಿಕರ ಮುಖಂಡರೊಂದಿಗೆ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಮಾಲಿಗಳು, ಆಟೊ, ಟ್ಯಾಕ್ಸಿ ಚಾಲಕರು, ಮನೆಕೆಲಸಗಾರರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ವಿವಿಧ ಕಾರ್ಮಿಕ ಸಂಟನೆಗಳ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಅಹವಾಲುಗಳನ್ನು ಮುಂದಿಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಆಟೊ ಚಾಲಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು ಎಂದ ಅವರು, ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ದೃಷ್ಟಿಯಿಂದ ಈಗಾಗಲೇ ಜಾರಿಯಲ್ಲಿರುವ ಕೇಂದ್ರ-ರಾಜ್ಯ ಸರಕಾರಗಳ ಹಲವಾರು ಯೋಜನೆಗಳಲ್ಲಿನ ನ್ಯೂನತೆಗಳು ಲೋಪದೋಷಗಳನ್ನು ಸರಿಪಡಿಸಿ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಲವು ಯೋಜನೆಗಳಲ್ಲಿ 40ನೆ ವಯಸ್ಸಿನ ನಂತರದವರು ಸೇರ್ಪಡೆಯಾಗಲು ನಿಯಮಗಳಲ್ಲಿ ಅವಕಾಶವಿಲ್ಲ, ಆದರೆ ಬಹುತೇಕ ವಲಯಗಳಲ್ಲಿ 40ಕ್ಕಿಂತ ಹೆಚ್ಚಿನ ವಯಸ್ಸಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರನ್ನು ಇಂತಹ ಯೋಜನೆಗಳ ವ್ಯಾಪ್ತಿಗೆ ತರಲು ನಿಯಮಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಲಾಗುವುದು ಎಂದರು ಸಚಿವರು ಭರವಸೆ ನೀಡಿದರು.

ಸಭೆಯಲ್ಲಿ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಪಿ.ಎಂ. ಮಣಿವಣ್ಣನ್, ಇಲಾಖೆ ಆಯುಕ್ತ ವಿ.ಎಸ್.ಶಾಂತಾರಾಂ, ಜಂಟಿ ಕಾರ್ಯದರ್ಶಿ ಚಿದಾನಂದ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News