ಸಿದ್ಧಾಂತಗಳ ಮೇಲೆ ಚುನಾವಣೆ ನಡೆಯುವ ಕಾಲ ಈಗಿಲ್ಲ: ಸಂತೋಷ್ ಹೆಗ್ಡೆ

Update: 2019-12-09 17:56 GMT

ಬೆಂಗಳೂರು, ಡಿ.9: ಸಿದ್ಧಾಂತಗಳ ಮೇಲೆ ಚುನಾವಣೆ ನಡೆಯುವ ಕಾಲ ಈಗಿಲ್ಲ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.

ಉಪಚುನಾವಣೆಯ ಫಲಿತಾಂಶ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರನ್ನು ಮತದಾರರು ಇಂದು ಅರ್ಹ ಶಾಸಕರನ್ನಾಗಿ ಮಾಡಿದ್ದಾರೆ. ಅದನ್ನು ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ಒಂದು ರೀತಿಯಲ್ಲಿ ಒಂದು ಪಕ್ಷಕ್ಕೆ ಬಹುಮತ ಬರುವುದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ವಿಚಾರ ಎಂದು ಹೇಳಿದರು.

ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಅರ್ಹರಾದ ಮೇಲಷ್ಟೇ ವಿಧಾನಸಭೆ ಪ್ರವೇಶಿಸಬೇಕಿತ್ತು. ಆದ್ದರಿಂದ ಅನರ್ಹರಾಗಿಯೇ ಉಳಿದುಕೊಂಡವರು ಮುಂದಿನ ಚುನಾವಣೆಯವರೆಗೂ ಕಾಯಬೇಕಾಗುತ್ತದೆ ಎಂದು ತಿಳಿಸಿದರು.

ಪದೇ ಪದೆ ಶಾಸಕರ ರಾಜೀನಾಮೆ ಪ್ರಹಸನಗಳು ಪುನರಾವರ್ತನೆಯಾಗಬಾರದು. ಚುನಾಯಿತರಾದವರು ಇನ್ನಾದರೂ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಲಿ ಎಂಬುದಷ್ಟೇ ನನ್ನ ಕೋರಿಕೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News