ನಿತ್ಯಾನಂದ ವಿರುದ್ಧದ ಅತ್ಯಾಚಾರ ಆರೋಪ: ಪ್ರಾಸಿಕ್ಯೂಷನ್ ನನ್ನ ವಿರುದ್ಧವೆ ಕ್ರಮ ಕೈಗೊಳ್ಳುತ್ತಿದೆ ಎಂದ ದೂರುದಾರ

Update: 2019-12-09 18:01 GMT

ಬೆಂಗಳೂರು, ಡಿ.9: ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಅವರನ್ನು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸುವ ಬದಲು ಪ್ರಾಸಿಕ್ಯೂಷನ್ ನನ್ನ ವಿರುದ್ಧವೇ ಪ್ರತಿಕೂಲ ಕ್ರಮ ಕೈಗೊಳ್ಳುತ್ತಿದೆ ಎಂದು ಪ್ರಕರಣದ ದೂರುದಾರ ಕೆ.ಲೆನಿನ್ ಹೈಕೋರ್ಟ್‌ಗೆ ದೂರಿದ್ದಾರೆ.

ಸೆಷನ್ಸ್ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣವನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಕೋರಿ ದೂರುದಾರ ಕೆ.ಲೆನಿನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಲೆನಿನ್ ಪರ ವಾದಿಸಿದ ವಕೀಲರು, ವಿಚಾರಣೆಗೆ ನಿತ್ಯಾನಂದ ಸ್ವಾಮೀಜಿಯನ್ನು ಈತನಕ ಹಾಜರುಪಡಿಸಿಲ್ಲ. ಬದಲಿಗೆ ಸಾಕ್ಷಿದಾರರಿಗೇ ವಾರಂಟ್ ಹೊರಡಿಸಲಾಗುತ್ತಿದೆ. ವಾರಂಟ್ ರಿಕಾಲ್ ಮಾಡಿಕೊಳ್ಳಲು ಪ್ರಾಸಿಕ್ಯೂಟರ್ ಸಹಕರಿಸುತ್ತಿಲ್ಲ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಾಮನಗರ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ವಿರುದ್ಧ ದೂರುದಾರ ಮಾಡಿರುವ ಆರೋಪಗಳ ಬಗ್ಗೆ ವಿವರಣೆ ನೀಡಿ ಎಂದು ರಾಜ್ಯ ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿ ವಿಚಾರಣೆಯನ್ನು ಡಿ.12ಕ್ಕೆ ಮುಂದೂಡಿದೆ.

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಗೈರು ಹಾಜರಿಗೆ ಕೋರಿ ನಿತ್ಯಾನಂದ ಸ್ವಾಮೀಜಿ ಸಲ್ಲಿಸಿದ್ದ ಮನವಿಗೆ ರಾಮನಗರದ 3ನೆ ಹೆಚ್ಚುವರಿ ಮತ್ತು ಸೆಷನ್ಸ್ ಕೋರ್ಟ್ ಸೋಮವಾರ ಸಮ್ಮತಿಸಿದೆ.

ಪ್ರಕರಣದ ಮೊದಲ ಆರೋಪಿ ನಿತ್ಯಾನಂದ ಸ್ವಾಮೀಜಿ ಖುದ್ದು ಹಾಜರಿಗೆ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ವಿನಾಯಿತಿ ನೀಡಿದ್ದು, ವಿಚಾರಣೆಯನ್ನು ಮಂಗಳವಾರಕ್ಕೆ (ಡಿ.10) ಮುಂದೂಡಿದರು. ಪ್ರಕರಣದ ಪ್ರಮುಖ ಸಾಕ್ಷಿ ಲೆನಿನ್ ಮತ್ತು ನಿತ್ಯಾನಂದ ಪರ ವಕೀಲರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News