ದಶಕಗಳ ಬಳಿಕ ಮೊದಲ ಬಾರಿ ಸ್ವದೇಶದಲ್ಲಿ ಟೆಸ್ಟ್ ಪಂದ್ಯ ಆಯೋಜನೆಗೆ ಪಾಕ್ ಸಜ್ಜು

Update: 2019-12-10 07:46 GMT

ಲಾಹೋರ್, ಡಿ.9: ಪಾಕಿಸ್ತಾನ ತಂಡ ಸುಮಾರು 10 ವರ್ಷಗಳ ಬಳಿಕ ತನ್ನ ತವರು ನೆಲದಲ್ಲಿ ಟೆಸ್ಟ್ ಪಂದ್ಯದ ಆತಿಥ್ಯ ವಹಿಸಿಕೊಳ್ಳಲು ಸಜ್ಜಾಗಿದೆ. ಇದೇ ತಿಂಗಳು ಶ್ರೀಲಂಕಾ ತಂಡದ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ಆಯೋಜಿಸಲು ಸರ್ವ ಸಿದ್ಧತೆ ನಡೆಸಿದೆ.

2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ಬಸ್‌ನ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ ಬಳಿಕ ಮೊದಲ ಬಾರಿ ಟೆಸ್ಟ್ ಸರಣಿಯನ್ನು ಪಾಕ್‌ನಲ್ಲಿ ಆಯೋಜಿಸಲಾಗುತ್ತಿದೆ. ಉಗ್ರರ ದಾಳಿಗೆ ಆರು ಮಂದಿ ಭದ್ರತಾ ಸಿಬ್ಬಂದಿ ಹಾಗೂ ಇಬ್ಬರು ನಾಗರಿಕರು ಮೃತಪಟ್ಟಿದ್ದರು. ಶ್ರೀಲಂಕಾದ ಆರು ಆಟಗಾರರಿಗೆ ಗಾಯವಾಗಿತ್ತು. ಉಗ್ರರ ದಾಳಿಯ ಬಳಿಕ ಅಂತರ್‌ರಾಷ್ಟ್ರೀಯ ಕ್ರಿಕೆಟ್ ತಂಡಗಳು ಪಾಕ್‌ಗೆ ಬಂದು ಆಡಲು ಹಿಂದೇಟು ಹಾಕಲಾರಂಭಿಸಿದವು. ಪಾಕಿಸ್ತಾನ ಎಲ್ಲ ತಂಡಗಳಿಗೆ ಸುರಕ್ಷಿತವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಭರವಸೆ ನೀಡಿದ ಬಳಿಕ ಶ್ರೀಲಂಕಾ ಈ ವರ್ಷಾರಂಭದಲ್ಲಿ ಸೀಮಿತ ಓವರ್ ಕ್ರಿಕೆಟ್ ಪಂದ್ಯಗಳನ್ನು ಆಡಲು ಪಾಕ್‌ಗೆ ಆಗಮಿಸಿತ್ತು. ಆದರೆ, ಭದ್ರತೆಯ ಭೀತಿಯನ್ನು ಮುಂದಿಟ್ಟುಕೊಂಡು 10 ಪ್ರಮುಖ ಆಟಗಾರರು ಪಾಕ್ ಪ್ರವಾಸದಿಂದ ದೂರ ಉಳಿದಿದ್ದರು.

 ‘‘ಪಾಕಿಸ್ತಾನಕ್ಕೆ ಟೆಸ್ಟ್ ಕ್ರಿಕೆಟ್‌ಗೆ ವಾಪಸಾಗಲು ಇದು ಸರಿಯಾದ ಸಮಯ. 2009ರ ಘಟನೆಯ ಬಳಿಕ ಆಟಗಾರರು ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಯಪಡುವಂತಾಗಿತ್ತು. ನಮ್ಮ ಟ್ವೆಂಟಿ-20 ಹಾಗೂ ಏಕದಿನ ತಂಡಗಳು ಪಾಕಿಸ್ತಾನಕ್ಕೆ ಬಂದಿವೆ. ಪಾಕ್‌ನಲ್ಲಿ ಭದ್ರತೆ ಹಾಗೂ ಇತರ ವ್ಯವಸ್ಥೆಗಳು ಉತ್ತಮವಾಗಿವೆ ಎಂದು ಸಹ ಆಟಗಾರರು ನಮಗೆ ಹೇಳಿದ್ದಾರೆ. ಎಲ್ಲ ಆಟಗಾರರು ಆಡಲು ಸಿದ್ಧರಾಗಿದ್ದು, ಪಾಕಿಸ್ತಾನದಲ್ಲಿ ಉತ್ತಮ ಸರಣಿಯನ್ನು ಎದುರು ನೋಡುತ್ತಿದ್ದೇವೆ’’ ಎಂದು ಶ್ರೀಲಂಕಾದ ನಾಯಕ ಡಿಮುತ್ ಕರುಣರತ್ನೆ ತಿಳಿಸಿದರು.

ಪಾಕಿಸ್ತಾನ-ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಬುಧವಾರ ರಾವಲ್ಪಿಂಡಿಯಲ್ಲಿ ಆರಂಭವಾಗಲಿದೆ. ಪಾಕಿಸ್ತಾನದ ಕ್ರಿಕೆಟ್ ಇತಿಹಾಸದಲ್ಲಿ ಡಿ.11ರಂದು ತುಂಬಾ ವಿಶೇಷವಾಗಿದೆ. 1982ರಲ್ಲಿ ಉಭಯ ತಂಡಗಳ ನಡುವೆ ನಡೆದಿದ್ದ ಮೊದಲ ಟೆಸ್ಟ್ ಸರಣಿಯ ನಾಯಕರಾಗಿದ್ದ ಬಂಡುಲಾ ವರ್ನಪುರ ಹಾಗೂ ಜಾವೆದ್ ಮಿಯಾಂದಾದ್‌ಗೆ ಆಹ್ವಾನ ನೀಡಲಾಗಿದೆ ಎಂದು ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

 ಶ್ರೀಲಂಕಾ ತಂಡ ನೂತನ ಕೋಚ್ ಮಿಕಿ ಅರ್ಥರ್ ಮಾರ್ಗದರ್ಶನದಲ್ಲಿ ಮೊದಲ ಸರಣಿ ಆಡಲು ತಯಾರಾಗಿದೆ. ಕಳೆದ ಗುರುವಾರ ಕೋಚ್ ಹುದ್ದೆಯನ್ನು ವಹಿಸಿಕೊಂಡಿದ್ದ ಅರ್ಥರ್ ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News