ವಿಧ್ವಂಸಕ ಕೃತ್ಯಕ್ಕೆ ಹಣ ವರ್ಗಾವಣೆ ಆರೋಪ: ಲಷ್ಕರ್-ಎ-ತೈಬಾ ಸದಸ್ಯನ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್

Update: 2019-12-10 16:15 GMT

ಬೆಂಗಳೂರು, ಡಿ.10: ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೈಬಾ(ಎಲ್‌ಇಟಿ) ಸಂಘಟನೆಯ ಸದಸ್ಯ ಇಮ್ರಾನ್ ಜಲಾಲ್(ಬಿಲಾಲ್ ಅಹಮದ್)(45) ಅವರಿಗೆ ನಗರದ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಇಮ್ರಾನ್ ಜಲಾಲ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ರವಿ ಮಳಿಮಠ ನೇತೃತ್ವದ ವಿಭಾಗೀಯ ನ್ಯಾಯಪೀಠವು ಮಂಗಳವಾರ ತೀರ್ಪುನ್ನು ಪ್ರಕಟಿಸಿದೆ. ವಿಧಾನಸೌಧ ಮತ್ತು ಪ್ರಮುಖ ಸಾಫ್ಟ್‌ವೇರ್ ಕಂಪೆನಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದಲ್ಲಿ ಇಮ್ರಾನ್ ಜಲಾಲ್ ಈಗಾಗಲೇ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ವಿದೇಶದ ಉಗ್ರ ಸಂಘಟನೆಗಳಿಂದ ಜಲಾಲ್ ಖಾತೆಗೆ ಹಣ ಸಂದಾಯವಾಗಿರುವ ಬಗ್ಗೆ ದೊರೆತ ದಾಖಲೆಗಳ ಪ್ರಕಾರ 2009ರಲ್ಲಿ ಲೇವಾದೇವಿ ನಿಯಂತ್ರಣ ಕಾಯ್ದೆಯಡಿ ಇ.ಡಿ.ಪ್ರಕರಣ ದಾಖಲಿಸಿತ್ತು. 9 ವರ್ಷಗಳ ವಿಚಾರಣೆ ಬಳಿಕ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಜಲಾಲ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಕೆಳ ನ್ಯಾಯಾಲಯದ ಆದೇಶ ಸರಿಯಾಗಿದೆ ಎನ್ನುವ ಮೂಲಕ ಆದೇಶವನ್ನು ಎತ್ತಿ ಹಿಡಿದಿದೆ.

ಬಳ್ಳಾರಿಯ ಹೊಸಪೇಟೆಯಿಂದ 2007ರ ಜ.5ರಂದು ಖಾಸಗಿ ಬಸ್‌ನಲ್ಲಿ ನಗರಕ್ಕೆ ಬರುತ್ತಿದ್ದಾಗ ಗೊರಗುಂಟೆಪಾಳ್ಯದಲ್ಲಿ ಜಲಾಲ್‌ನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಎ.ಕೆ-47ರೈಫಲ್, 200 ಸುತ್ತು ಜೀವಂತ ಗುಂಡುಗಳು, ಉಗ್ರ ಸಂಘಟನೆಗೆ ಸೇರಿದ ಪುಸ್ತಕ, ವಾರ ಪತ್ರಿಕೆಗಳು, ಬೆಂಗಳೂರು ನಕ್ಷೆ, 5 ಸಿಮ್ ಕಾರ್ಡ್, 38 ಸಾವಿರ ನಗದು ವಶಕ್ಕೆ ಪಡೆದಿದ್ದರು. ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್ 2016ರ ಅ.6ರಂದು ಜಲಾಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಶ್ರೀನಗರದ ಖಾಸಗಿ ಕಂಪೆನಿಯೊಂದರ ಗುಮಾಸ್ತನ ಮಗನಾದ ಜಲಾಲ್, ಜಮ್ಮು ಕಾಶ್ಮೀರ ವಿಮೋಚನಾ ಸಂಘಟನೆ ಹಾಗೂ ನಿಷೇಧಿತ ಲಷ್ಕರ್-ಇ-ತೈಬಾದ ಸದಸ್ಯನಾಗಿದ್ದ. ಜಲಾಲ್ ಹೆಸರಿನಲ್ಲಿ ನಕಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ಎರಡು ಬಾರಿ ಪಾಕಿಸ್ತಾನಕ್ಕೆ ತೆರಳಿ ಭಯೋತ್ಪಾದಕ ಶಿಬಿರಗಳಲ್ಲಿ ತರಬೇತಿ ಪಡೆದಿದ್ದ ಎಂಬ ಅಂಶವನ್ನು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದರು. ಎಲ್‌ಇಟಿ ಮುಖ್ಯಸ್ಥರ ಸೂಚನೆಯಂತೆ ಐದು ಬಾರಿ ಬೆಂಗಳೂರಿಗೆ ಬಂದು ಹೋಗಿದ್ದ ಜಲಾಲ್, ವಿಮಾನ ನಿಲ್ದಾಣ, ಸಾಫ್ಟ್‌ವೇರ್ ಕಂಪೆನಿಗಳ ಬಳಿ ಸುತ್ತಾಡಿ ಮಾಹಿತಿ ಸಂಗ್ರಹಿಸಿದ್ದ ಎನ್ನಲಾಗಿದ್ದು, ಜಲಾಲ್ ಬಳಿ ಸಿಕ್ಕ ಬೆಂಗಳೂರಿನ ನಕ್ಷೆಯನ್ನು ವಿಧಾನಸೌಧ, ಹೈಕೋರ್ಟ್ ಸೇರಿ ಪ್ರಮುಖ ಸ್ಥಳಗಳನ್ನು ಮಾರ್ಕ್ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News