ಹೆದ್ದಾರಿ ಯೋಜನೆಗಳಿಗೆ ರಾಜ್ಯಕ್ಕೆ 50 ಸಾವಿರ ಕೋಟಿ ರೂ. ಅನುದಾನ: ಬೆಂಗಳೂರಿನಲ್ಲಿ ನಿತಿನ್ ಗಡ್ಕರಿ

Update: 2019-12-10 16:25 GMT

ಬೆಂಗಳೂರು, ಡಿ.10: ಕೇಂದ್ರ ಭೂಸಾರಿಗೆ ಇಲಾಖೆಯಿಂದ ರಾಜ್ಯಕ್ಕೆ ಒಂದು ಲಕ್ಷ ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದು, ಸದ್ಯ 50 ಸಾವಿರ ಕೋಟಿ ರೂ. ಯೋಜನೆಗಳಿಗೆ ಅನುಮೋದನೆ ನೀಡಲಿದ್ದೇವೆ ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಪಾಲ್ಗೊಂಡು ಮಾತನಾಡಿದ ಅವರು, ಆಗುಂಬೆ, ಶಿರಾಡಿ, ಚಾರ್ಮಾಡಿ, ಸಂಪಾಜೆ ಘಾಟಿಗೆ 120 ಕೋಟಿ ರೂ.ಸೇರಿದಂತೆ ಈ ವರ್ಷ ನಮ್ಮ ಇಲಾಖೆಯಿಂದ ಕರ್ನಾಟಕಕ್ಕೆ 2150 ಕೋಟಿ ರೂ. ವಾರ್ಷಿಕ ಅನುದಾನ ಕೊಡಬೇಕಿತ್ತು, ಅದನ್ನು 3919 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದರು.

ಕರ್ನಾಟಕದಲ್ಲಿ ನಾನಾ ಯೋಜನೆಗಳಿಗೆ ಭೂ ಸ್ವಾಧೀನ ಮತ್ತು ಅರಣ್ಯ ಪರಿಸರ ನಿರಾಪೇಕ್ಷಣೆ ಸಮಸ್ಯೆಯಾಗುತ್ತಿದೆ. ಅದನ್ನು ಬಗೆಹರಿಸಿಕೊಂಡರೆ ಹೆಚ್ಚೆಚ್ಚು ಅನುದಾನ ಬಳಸಿಕೊಳ್ಳಲು ಅವಕಾಶವಿದೆ ಎಂದು ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಅವರು ಹೇಳಿದರು.

ಬೆಂಗಳೂರಿನ ಉಪ ನಗರಗಳನ್ನು ಸಂಪರ್ಕಿಸುವ ಸೆಟಲೈಟ್ ರಿಂಗ್ ರಸ್ತೆಯ ವೆಚ್ಚವನ್ನು ಕೇಂದ್ರ ಭರಿಸಲು ಒಪ್ಪಿದೆ. ಒಟ್ಟು 2300 ಕಿಮೀ ರಸ್ತೆಗೆ ಸಂಬಂಧಿಸಿದ ಐದು ವಿವಿಧ ಯೋಜನೆಗಳಿಗೆ ಅಗತ್ಯವಾದ ಭೂ ಸ್ವಾಧೀನಕ್ಕೆ ಶೇ.50ರಷ್ಟು ನೆರವು ನೀಡುವುದಾಗಿ ಹೇಳಿದ್ದೆವು. ಆದರೆ, ಮುಖ್ಯಮಂತ್ರಿಯವರು ಶೇ.75ರಷ್ಟು ಭರಿಸುವಂತೆ ಕೋರಿದ್ದಾರೆ. ಅದಕ್ಕೂ ಒಪ್ಪಿದ್ದೇವೆ. ಯೋಜನೆಗೆ ಬಳಸುವ ಜಲ್ಲಿ, ಮರಳಿಗೆ ರಾಯಧನ ಬಿಡಬೇಕು ಮತ್ತು ಸಿಮೆಂಟ್ ಬಳಕೆಗೆ ಜಿಎಸ್ಟಿ ರಿಯಾಯಿಗೆ ಕ್ರಮಕೈಗೊಳ್ಳುವಂತೆ ಸಲಹೆ ನೀಡಿದ್ದೇವೆ ಎಂದು ಅವರು ಹೇಳಿದರು.

ಪುಣೆ- ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣವನ್ನು ನಾವು ಮುಂಬೈ-ಬೆಂಗಳೂರು ಎಕ್ಸ್‌ಪ್ರೆಸ್ ವೇ ಎಂದೇ ಪರಿಗಣಿಸುತ್ತೇವೆ. ಎರಡು ನಗರಗಳನ್ನು ಸಂಪರ್ಕಿಸುವ ಉತ್ತಮ ರಸ್ತೆ ಇದಾಗಲಿದೆ. ರಾಜ್ಯದಲ್ಲಿ ಹಾದುಹೋಗುವ ರಸ್ತೆಯ ಸುತ್ತಮುತ್ತ ಕೈಗಾರಿಕೆ ಹಬ್, ಲಾಜಿಸ್ಟಿಕ್ ಪಾರ್ಕ್ ನಿರ್ಮಿಸಿಕೊಂಡರೆ ಈ ಯೋಜನೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಹುಬ್ಬಳ್ಳಿ-ಸೊಲ್ಲಾಪುರ ಚತುಷ್ಪಥ ಹೆದ್ದಾರಿ ರಸ್ತೆ ನಿರ್ಮಾಣ ಪ್ರಸ್ತಾವನೆಗೆ ಆರ್ಥಿಕ ಪ್ರಾಮುಖ್ಯತೆ ಹಾಗೂ ಅಂತರ್‌ರಾಜ್ಯಗಳ ಸಂಪರ್ಕ ಯೋಜನೆಯಡಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ತಾತ್ವಿಕ ಒಪ್ಪಿಗೆ ನೀಡಿದ್ದಾರೆಂದು ತಿಳಿಸಿದರು.

ಹುಬ್ಬಳ್ಳಿ-ಸೊಲ್ಲಾಪುರ ಮಾರ್ಗದಲ್ಲಿ ವಾಹನಗಳ ಸಂಚಾರ ಅಧಿಕ ಪ್ರಮಾಣದಲ್ಲಿದ್ದು, ಈ ಮಾರ್ಗವನ್ನು ಚತುಷ್ಪಥ ರಸ್ತೆಯನ್ನಾಗಿ ನಿರ್ಮಿಸಿದರೆ ಸುಮಗ್ರ ಸಂಚಾರ ಹಾಗೂ ಅಂತರ್‌ರಾಜ್ಯ ಸಂಪರ್ಕಕ್ಕೆ ಅನುಕೂಲವಾಗುತ್ತದೆ. ಈ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದಾಗ, ಅವರಿಂದಲೂ ಸಕಾರಾತ್ಮಕವಾಗಿ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅವರು ತಿಳಿಸಿದರು. ಈ ವೇಳೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೇಂದ್ರ ಹಾಗೂ ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News