ಜಮ್ಮು-ಕಾಶ್ಮೀರದಲ್ಲಿ ಸಹಜ ಸ್ಥಿತಿಯನ್ನು ಮರುಸ್ಥಾಪಿಸಿ: ಭಾರತಕ್ಕೆ ಐರೋಪ್ಯ ಒಕ್ಕೂಟ ಆಗ್ರಹ

Update: 2019-12-10 17:21 GMT

ಹೊಸದಿಲ್ಲಿ, ಡಿ.10: ಕಾಶ್ಮೀರದಲ್ಲಿ ಮುಂದುವರಿದಿರುವ ನಿರ್ಬಂಧಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿರುವ ಐರೋಪ್ಯ ಒಕ್ಕೂಟ (ಇಯು)ವು ಅಲ್ಲಿ ಸಹಜ ಸ್ಥಿತಿಯನ್ನು ಮರುಸ್ಥಾಪಿಸುವಂತೆ ಭಾರತವನ್ನು ಕೇಳಿಕೊಂಡಿದೆ.

 ಮಂಗಳವಾರ ಇಲ್ಲಿ ತನ್ನ ಮೊದಲ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನೂತನ ಇಯು ರಾಯಭಾರಿ ಉಗೊ ಅಸ್ಟುಟೊ ಅವರು, ಸಹಜ ಸ್ಥಿತಿಯನ್ನು ಮತ್ತು ಜನರ ಹಕ್ಕುಗಳು ಹಾಗೂ ಸ್ವಾತಂತ್ರದ ಮರುಸ್ಥಾಪನೆಗೆ ಭಾರತವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಕಾಶ್ಮೀರ ಕುರಿತು ಐರೋಪ್ಯ ಒಕ್ಕೂಟದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಮತ್ತು ಭಾರತದ ಭದ್ರತಾ ಕಳವಳಗಳನ್ನು ಅದು ಅರ್ಥ ಮಾಡಿಕೊಂಡಿದೆ ಎಂದು ತಿಳಿಸಿದರು.

ಪೌರತ್ವ (ತಿದ್ದುಪಡಿ) ಮಸೂದೆಗೆ ಇಯು ಪ್ರತಿಕ್ರಿಯೆಯನ್ನು ಕೋರಿದಾಗ ಅಸ್ಟುಟೊ,ಭಾರತದ ಸಂವಿಧಾನವು ಸಮಾನತೆಯ ತತ್ತ್ವವನ್ನು ಒಳಗೊಂಡಿದೆ ಮತ್ತು ಇದನ್ನು ಎತ್ತಿ ಹಿಡಿಯಲಾಗುತ್ತದೆ ಎಂದು ನಾವು ಆಶಿಸಿದ್ದೇವೆ ಎಂದು ತಿಳಿಸಿದರು.

ಗಡಿಯಾಚೆಯ ಭಯೋತ್ಪಾದನೆ ಕುರಿತಂತೆ ಅವರು,ಪಾಕಿಸ್ತಾನವು ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಉಗ್ರರು ಮತ್ತು ಭಯೋತ್ಪಾದಕರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲೇಬೇಕು ಎಂದರು.

ಈ ಹಿಂದೆ ಐರೋಪ್ಯ ಒಕ್ಕೂಟದ ಸಂಸದರ ನಿಯೋಗವೊಂದು ಕಾಶ್ಮೀರಕ್ಕೆ ನೀಡಿದ್ದ ಭೇಟಿಯು ಇಯು ನೀತಿ ನಿರ್ಧಾರದ ಅಭಿವ್ಯಕ್ತಿಯಲ್ಲ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News