ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಬಳ್ಳಾರಿ ತಂಡದ ಮಾಲಕ ಸೇರಿ ಮೂವರಿಗೆ ಹೈಕೋರ್ಟ್ ಜಾಮೀನು

Update: 2019-12-11 16:37 GMT

ಬೆಂಗಳೂರು, ಡಿ.11: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗರಾದ ಸಿಎಂ ಗೌತಮ್ ಹಾಗೂ ಅಬ್ರಾರ್ ಖಾಜಿಗೆ ಹೈಕೋರ್ಟ್ ಜಾಮೀನು ನೀಡಿದೆ. ಜೊತೆಗೆ ಬಳ್ಳಾರಿ ಟಸ್ಕರ್ಸ್ ತಂಡದ ಮಾಲಕ ಅರವಿಂದ್‌ ರೆಡ್ಡಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 

ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕೋರ್ಟ್‌ನ ಅನುಮತಿ ಇಲ್ಲದೆ ದೇಶವನ್ನು ತೊರೆಯಬಾರದು ಎಂಬುದು ಸೇರಿ ಇನ್ನಿತರ ಷರತ್ತುಗಳನು ವಿಧಿಸಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತು.

ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಗೌತಮ್ ಮತ್ತು ಅವರ ಸಹ ಆಟಗಾರ ಖಾಜಿ ಅವರನ್ನು 2019ರ ನವೆಂಬರ್‌ನಲ್ಲಿ ಸಿಸಿಬಿ ಅವರು ಬಂಧಿಸಿದ್ದರು. ಆರೋಪಿ ಗೌತಮ್ ಮತ್ತು ಖಾಜಿ ಪರ ವಾದಿಸಿದ ವಕೀಲರು, ನಮ್ಮ ಕಕ್ಷಿದಾರರ ವಿರುದ್ಧ ಯಾವುದೇ ನಿರ್ದಿಷ್ಟ ಆರೋಪಗಳಿಲ್ಲ. ಕೆಪಿಎಲ್ ಪಂದ್ಯಗಳಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲೂ ಮೂರು ತಿಂಗಳುಗಳ ಕಾಲ ವಿಳಂಬವಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಈಗಾಗಲೇ ಗೌತಮ್ ಮತ್ತು ಖಾಜಿ ಇಬ್ಬರೂ ನ್ಯಾಯಾಂಗ ಬಂಧನಲ್ಲಿದ್ದಾರೆ. ಹೀಗಾಗಿ, ಇವರಿಗೆ ಜಾಮೀನು ಮಂಜೂರು ಮಾಡಬೇಕೆಂದು ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಮೂವರು ಆರೋಪಿಗಳಿಗೆ ಜಾಮೀನು ವುಂಜೂರು ಮಾಡಿ ಆದೇಶ ಹೊರಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News