ಬೆಂಗಳೂರನ್ನು ಕಸ ಮುಕ್ತವಾಗಿಸಲು ಸೂಕ್ತ ಕ್ರಮ: ಮೇಯರ್ ಗೌತಮ್ ಕುಮಾರ್

Update: 2019-12-11 16:49 GMT

ಬೆಂಗಳೂರು, ಡಿ.11: ಬೆಂಗಳೂರನ್ನು ಕಸ ಮುಕ್ತ ನಗರವನ್ನಾಗಿಸಲು ಸಮಗ್ರ ಅಧ್ಯಯನ ನಡೆಸಿ ಕೂಡಲೆ ಅದನ್ನು ಜಾರಿಗೊಳಿಸಲು ಸೂಕ್ತ ಕ್ರಮ ವಹಿಸಲಾಗುತ್ತಿದೆ ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.

ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಗರದ ಕಸದ ಸಮಸ್ಯೆ ನಿವಾರಣೆ ಮಾಡುವ ಬಗ್ಗೆ ಇಂದೋರ್ ನಗರ ಹಾಗೂ ನೆದರ್‌ಲ್ಯಾಂಡ್ ಪ್ರತಿನಿಧಿಗಳ ತಂಡದ ಜತೆ ಸಭೆ ನಡೆಸಿ ಮಾತನಾಡಿದ ಅವರು, ಇಂದೋರ್ ನಗರ ಹಾಗೂ ನೆದರ್‌ಲ್ಯಾಂಡ್ ಪ್ರತಿನಿಧಿಗಳ ತಂಡವು ನಗರದ ಆಯ್ದ 5 ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸಿದ 3 ತಿಂಗಳೊಳಗಾಗಿ ಅದನ್ನು ಪರಿಣಾಮಗಾರಿಯಾಗಿ ಜಾರಿಗೊಳಿಸುತ್ತೇವೆ. ನಂತರ ಎಲ್ಲ ವಾರ್ಡ್‌ಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಎಂದು ತಿಳಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಒಂದು ದೊಡ್ಡ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾದರೆ ಅದಕ್ಕೆ ಸಮಗ್ರ ಯೋಜನೆ ರೂಪಿಸಿಕೊಂಡು ಜಾರಿಗೊಳಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ನಿವಾರಣೆ ಮಾಡುವ ದೃಷ್ಟಿಯಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಂಸ್ಕರಣಾ ಘಟಕ, ವೇಸ್ಟ್ ಟು ಎನರ್ಜಿ ಪ್ಲಾಂಟ್ಸ್, ಬಯೋಮಿಥನೈಸೇಷನ್, ಟ್ರಾನ್ಸಫರ್ ಸ್ಟೇಷನ್ಸ್, ಆಟೋ ಟಿಪ್ಪರ್, ಕಾಂಪ್ಯಾಕ್ಟರ್‌ಗಳು ಸೇರಿದಂತೆ ಇನ್ನಿತರ ಅಂಶಗಳನ್ನು ಯಾವ ಮಾದರಿಯಲ್ಲಿ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಜಾರಿಗೊಳಿಸಬೇಕಾಗುತ್ತದೆ ಎಂದು ತಿಳಿಸಿದರು.

ವೇಸ್ಟ್ ಎನರ್ಜಿ ಪ್ಲಾಂಟ್ ನಿರ್ಮಾಣ ಮಾಡಬೇಕಾದರೆ ಸರಕಾರದ ಅನುಮತಿ ಪಡೆಯಬೇಕಾಗುತ್ತದೆ. ಅದಕ್ಕೆಲ್ಲಾ ಸಮಯಾವಕಾಶ ಅಗತ್ಯವಿದೆ. ಈ ಪೈಕಿ ಅಲ್ಪಾವಧಿ ಹಾಗೂ ದೀರ್ಘಾವಧಿ ಯೋಜನೆಗಳ ವಿಸ್ತೃತ ಯೋಜನಾ ವರದಿ ಸಿದ್ದಪಡಿಸುವಂತೆ ಘನತ್ಯಾಜ್ಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅವರು ವರದಿ ನೀಡಿದ ಬಳಿಕ ಪಾಲಿಕೆ ಎಲ್ಲಾ ಸದಸ್ಯರಿಗೂ ಆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುವುದು. ಆ ಬಳಿಕ ಹಂತ ಹಂತವಾಗಿ ಯೋಜನೆಗಳನ್ನು ಜಾರಿಗೊಳಿಸಿ ಕಸದ ಸಮಸ್ಯೆ ನಿವಾರಣೆ ಮಾಡಲಾಗುವುದು ಎಂದು ಹೇಳಿದರು.

6 ತಿಂಗಳಿಗೊಮ್ಮೆ ಆರೋಗ್ಯ ಶಿಬಿರ: ಕಸ ಸಂಗ್ರಹಿಸುವ ಪೌರಕಾರ್ಮಿಕರಿಗೆ ಸಮರ್ಪಕವಾಗಿ ಸುರಕ್ಷಾ ಪರಿಕರಗಳನ್ನು ನೀಡಿ 6 ತಿಂಗಳಿಗೊಮ್ಮೆ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಲು ಕ್ರಮ ವಹಿಸಲಾಗುತ್ತಿದೆ. ಜತೆಗೆ ಇಂದೋರ್ ನಗರದಲ್ಲಿ ಕಸ ವಿಲೇವಾರಿ ಮಾಡುತ್ತಿರುವ ಪದ್ದತಿಯ ಬಗ್ಗೆ ತಿಳಿಯಲು ನಗರ ಕಸದ ವಿಲೇವಾರಿ ಮಾಡುತ್ತಿರುವ ಪೌರಕಾರ್ಮಿಕರ ಸಂಘದ ಪ್ರತಿನಿಧಿಗಳ ತಂಡವನ್ನು ಶೀಘ್ರವೇ ಕಳುಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್, ವಿಶೇಷ ಆಯುಕ್ತರು(ಘನತ್ಯಾಜ್ಯ ವಿಭಾಗ) ರಂದೀಪ್, ಜಂಟಿ ಆಯುಕ್ತ ಸರ್ಫರಾಜ್ ಖಾನ್ ಉಪಸ್ಥಿತರಿದ್ದರು.

ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಕಸದ ನಿವಾರಣೆಗೆ ಪರಿಹಾರವಿದೆ. ಆ ನಿಟ್ಟಿನಲ್ಲಿ ಈಗಾಗಲೇ ಇಂದೋರ್ ನಗರಕ್ಕೆ ಭೇಟಿ ನೀಡಿ ಕಸ ವಿಲೇವಾರಿ ಮಾಡುವ ಬಗ್ಗೆ ಮಾಹಿತಿ ಪಡೆಯಲಾಗಿದೆ.

-ಗೌತಮ್ ಕುಮಾರ್, ಬಿಬಿಎಂಪಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News