ಸಮೂಹ ಸಾರಿಗೆ ಹೆಚ್ಚು ಬಳಸುವಂತೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಮನವಿ

Update: 2019-12-11 17:50 GMT

ಬೆಂಗಳೂರು, ಡಿ.11: ರಾಜಧಾನಿ ಬೆಂಗಳೂರಿನಲ್ಲಿ ಪರಿಸರ ಮಾಲಿನ್ಯ ಹಾಗೂ ಸಂಚಾರ ದಟ್ಟಣೆ ಸಮಸ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಾಗಿ ಸಮೂಹ ಸಾರಿಗೆಯನ್ನು ಬಳಸುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಅಧ್ಯಕ್ಷ ಎನ್.ಎಸ್.ನಂದೀಶ್ ರೆಡ್ಡಿ ಮನವಿ ಮಾಡಿದ್ದಾರೆ.

ಬುಧವಾರ ನಗರದ ಮಾರತ್‌ಹಳ್ಳಿಯಲ್ಲಿರುವ ಕಲಾ ಮಂದಿರ್ ಬಳಿ ಸಿಟಿಜೆನ್ಸ್ ಫಾರ್ ಬೆಂಗಳೂರು ಮತ್ತು ಬಿಎಂಟಿಸಿ ಸಹಯೋಗದಲ್ಲಿ ಪ್ರತ್ಯೇಕ ಬಸ್ ಪಥದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ‘ನಿಮ್ಮ ಬಸ್, ನಮ್ಮ ಬಸ್, ಸೂಪರ್ ಎಕ್ಸ್‌ಪ್ರೆಸ್’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮೂಹ ಸಾರಿಗೆ ಉಪಯೋಗಿಸುವ ಮೂಲಕ ಬೆಂಗಳೂರನ್ನು ಮತ್ತೆ ಉದ್ಯಾನನಗರಿಯನ್ನಾಗಿ ಮಾಡಬಹುದು. ಸ್ವಂತ ವಾಹನಗಳಲ್ಲಿ ಒಬ್ಬರು ಇಬ್ಬರು ಹೋಗುವ ಬದಲು ಬಸ್‌ಗಳಲ್ಲಿ ಹೆಚ್ಚಿನ ಜನ ಸಂಚರಿಸಿದರೆ, ವೈಯಕ್ತಿಕ ವಾಹನಗಳ ಸಂಖ್ಯೆ ಕಡಿಮೆ ಆಗುತ್ತದೆ. ಸಮಯವು ಉಳಿತಾಯವಾಗುತ್ತದೆ ಎಂದು ಅವರು ಹೇಳಿದರು.

ಟಿನ್‌ಫ್ಯಾಕ್ಟರಿಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಹೋಗಲು 1 ಗಂಟೆ 30 ನಿಮಿಷ ಸಮಯವಾಗುತ್ತಿತ್ತು. ಆದರೆ, ಪ್ರತ್ಯೇಕ ಬಸ್ ಪಥ ಯೋಜನೆ ಜಾರಿಯಿಂದಾಗಿ 1 ಗಂಟೆ 12 ನಿಮಿಷಕ್ಕೆ ಸಿಲ್ಕ್ ಬೋರ್ಡ್ ತಲುಪಬಹುದು. ಸುಮಾರು 18 ನಿಮಿಷಗಳ ಸಮಯದ ಉಳಿತಾಯವಾಗುತ್ತದೆ ಎಂದು ನಂದೀಶ್ ರೆಡ್ಡಿ ಹೇಳಿದರು.

ರಾಜ್ಯ ಸರಕಾರವು ಆದ್ಯತೆಯ ಮೇರೆಗೆ ಪ್ರತ್ಯೇಕ ಬಸ್ ಪಥ ಯೋಜನೆ ಜಾರಿಗೆ ತಂದಿದೆ. ಈ ಸಂಬಂಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಿಟಿಜೆನ್ಸ್ ಫಾರ್ ಬೆಂಗಳೂರು ಸ್ವಯಂ ಸೇವಾ ಸಂಸ್ಥೆ ನಮ್ಮ ಜೊತೆ ಕೈ ಜೋಡಿಸಿದೆ. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಎಲ್ಲರೂ ಆದ್ಯತೆಯ ಮೇರೆಗೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಬಸ್ ಪಥ ಯೋಜನೆ ಯಶಸ್ವಿಯಾಗಲು ಎಲ್ಲ ಸಾರ್ವಜನಿಕರು ಕೈ ಜೋಡಿಸಬೇಕು. ಎಫ್‌ಎಂ 104 ಮತ್ತು 95 ರೇಡಿಯೋ ವಾಹಿನಿಗಳು ನಮ್ಮಿಂದಿಗೆ ಕೈ ಜೋಡಿಸಿವೆ. ಪ್ರಮುಖ ಕುಟುಂಬದ ಸಿನಿಮಾ ನಟರು ಬಿಎಂಟಿಸಿ ಪ್ರಚಾರ ರಾಯಭಾರಿಯಾಗಲು ಮುಂದೆ ಬಂದಿದ್ದಾರೆ ಎಂದು ನಂದೀಶ್ ರೆಡ್ಡಿ ಹೇಳಿದರು.

ಇದೇ ವೇಳೆ ನಂದೀಶ್ ರೆಡ್ಡಿ ಬಸ್‌ನಲ್ಲಿ ಸಂಚರಿಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ, ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News