ಡಿ.14ರಂದು ಎಂಐಎ ಮಹಿಳಾ ವಿಭಾಗಕ್ಕೆ ಚಾಲನೆ: ಎಂಐಎ ಕಾರ್ಯದರ್ಶಿ ಮೀರ್ ಅಬ್ದುಲ್ ಹಫೀಝ್

Update: 2019-12-11 17:52 GMT

ಬೆಂಗಳೂರು, ಡಿ.11: ಮುಸ್ಲಿಮ್ ಸಮುದಾಯದಲ್ಲಿನ ಉದ್ಯಮಿಗಳು, ಪ್ರತಿಭಾವಂತರಿಗೆ ಉದ್ಯಮ ಕ್ಷೇತ್ರದಲ್ಲಿ ಅಗತ್ಯ ಮಾರ್ಗದರ್ಶನ ನೀಡಲು 2004ರಲ್ಲಿ ಮುಸ್ಲಿಮ್ ಇಂಡಸ್ಟ್ರಿಯಲಿಸ್ಟ್ಸ್ ಅಸೋಸಿಯೇಷನ್(ಎಂಐಎ) ಆರಂಭಿಸಲಾಯಿತು. ಇದೀಗ ಎಂಐಎ ಮಹಿಳಾ ವಿಭಾಗಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಎಂಐಎ ಕಾರ್ಯದರ್ಶಿ ಮೀರ್ ಅಬ್ದುಲ್ ಹಫೀಝ್ ತಿಳಿಸಿದರು.

ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ದಾರುಸ್ಸಲಾಮ್ ಕಟ್ಟಡದಲ್ಲಿರುವ ಮುಸ್ಲಿಮ್ ಇಂಡಸ್ಟ್ರಿಯಲಿಸ್ಟ್ಸ್ ಅಸೋಸಿಯೇಷನ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಡಿ.14ರಂದು ನಗರದ ಎಂ.ಜಿ.ರಸ್ತೆಯಲ್ಲಿರುವ ಹೊಟೇಲ್ ಕ್ಯಾನೋಪಿಯಲ್ಲಿ ಎಂಐಎ ಮಹಿಳಾ ವಿಭಾಗಕ್ಕೆ ಚಾಲನೆ ನೀಡಲಾಗುತ್ತಿದ್ದು, ಸುಮಾರು 200-300 ಮಂದಿ ಮಹಿಳಾ ಉದ್ಯಮಿಗಳು ಹಾಗೂ ಉದ್ಯಮಗಳನ್ನು ಆರಂಭಿಸಲು ಉದ್ದೇಶಿಸಿರುವವರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಡಿ.12ರಂದು ಸಂಜೆ 5 ಗಂಟೆಯೊಳಗಾಗಿ ಎಂಐಎ ಮಹಿಳಾ ವಿಭಾಗದ ಸಂಸ್ಥಾಪಕ ಸದಸ್ಯೆ ರಾಬಿಯಾ ಕುಲ್ಸುಮ್ ಅವರನ್ನು ಮೊಬೈಲ್ ಸಂಖ್ಯೆ: 7204867191(ಕೇವಲ ವಾಟ್ಸ್ ಆ್ಯಪ್ ಮೂಲಕ ಸಂದೇಶ ಕಳುಹಿಸುವುದು)ಗೆ ಸಂಪರ್ಕಿಸಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಮೀರ್ ಅಬ್ದುಲ್ ಹಫೀಝ್ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಸಣ್ಣ ಕೈಗಾರಿಕೆ ಇಲಾಖೆಯ ನಿರ್ದೇಶಕ ಎಸ್.ಝಿಯಾವುಲ್ಲಾ, ನಿವೃತ್ತ ಐಎಎಸ್ ಅಧಿಕಾರಿ ಮುಹಮ್ಮದ್ ಸನಾವುಲ್ಲಾ ಸೇರಿದಂತೆ ಇನ್ನಿತರು ಗಣ್ಯರು ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಂಐಎ ಅಧ್ಯಕ್ಷ ಎಂ.ಶಫೀಖ್, ಖಜಾಂಚಿ ಹುಸೇನ್, ಜಂಟಿ ಖಜಾಂಚಿ ಅಬ್ದುಲ್ ರಶೀದ್, ಖಲೀಲುಲ್ಲಾ ಬೇಗ್, ಮಹಿಳಾ ವಿಭಾಗದ ಸಂಸ್ಥಾಪಕ ಸದಸ್ಯರಾದ ಶಬಾನಾ ಬೇಗಮ್, ಸಫಿನಾ ನಾಝ್, ರಾಬಿಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News