ಕರ್ಫ್ಯೂ ಹೇರಿಕೆ ಬಳಿಕವೂ ಮುಂದುವರಿದ ಹಿಂಸಾಚಾರ: ಸೇನೆಗೆ ಬುಲಾವ್

Update: 2019-12-19 05:29 GMT

ಗುವಾಹಟಿ, ಡಿ.12: ಪೌರತ್ವ ಮಸೂದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಕಾವು ಅಸ್ಸಾಂ ರಾಜಧಾನಿಯಲ್ಲಿ ಹೆಚ್ಚಿದ್ದು, ಕರ್ಫ್ಯೂ ಹೇರಿಕೆ ಬಳಿಕವೂ ಹಿಂಸಾಚಾರ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಬುಧವಾರ ತಡರಾತ್ರಿ ಪರಿಸ್ಥಿತಿ ನಿಯಂತ್ರಣಕ್ಕೆ ಸೇನೆಯನ್ನು ಕರೆಸಲಾಗಿದೆ. ವಿವಾದಾತ್ಮಕ ಕಾಯ್ದೆ ವಿರೋಧಿಸಿ ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದಿದ್ದು, ಪೊಲೀಸರು, ಅರೆ ಮಿಲಿಟರಿ ಪಡೆಗಳ ಜತೆ ಹೋರಾಟಗಾರರು ನೇರ ಸಂಘರ್ಷಕ್ಕೆ ಇಳಿದಿದ್ದಾರೆ.

ಅಸ್ಸಾಂನ ಹತ್ತು ಜಿಲ್ಲೆಗಳಲ್ಲಿ ಮೊಬೈಲ್ ಹಾಗೂ ಇಂಟರ್ ನೆಟ್ ಸೇವೆ ರದ್ದುಗೊಳಿಸಲಾಗಿದ್ದು, ಈಗಾಗಲೇ ತ್ರಿಪುರಾದಲ್ಲಿ ಸೇನೆಯ ಎರಡು ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಸೇನೆಯ ವಕ್ತಾರರು ಹೇಳಿದ್ದಾರೆ.

"ಗುವಾಹತಿಯಲ್ಲಿ ಕರ್ಫ್ಯೂ ವಿಧಿಸಿರುವ ಜತೆಗೆ ಸೇನೆಗೆ ಬುಲಾವ್ ನೀಡಲಾಗಿದೆ" ಎಂದು ಅಸ್ಸಾಂನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಕೇಶ್ ಅಗರ್‍ವಾಲ್ ಹೇಳಿದ್ದಾರೆ. ಗುವಾಹಟಿಯನ್ನೂ ಸೇನೆಯ ಎರಡು ತುಕಡಿಗಳನ್ನು ನಿಯೋಜಿಸಲಾಗಿದ್ದು, ಸೇನಾ ಸಿಬ್ಬಂದಿ ಈಗಾಗಲೇ ರಾಜ್ಯ ರಾಜಧಾನಿಯಲ್ಲಿ ಪಥಸಂಚಲನ ನಡೆಸಿದೆ ಎಂದು ಸೇನೆಯ ವಕ್ತಾರರು ವಿವರಿಸಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ 5 ಸಾವಿರ ಮಂದಿ ಅರೆಮಿಲಿಟರಿ ಪಡೆ ಸಿಬ್ಬಂದಿಯನ್ನು ವಿಮಾನಗಳ ಮೂಲಕ ಈ ಭಾಗಕ್ಕೆ ಕಳುಹಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.

ಈ ಮಧ್ಯೆ ರಾಜ್ಯಸಭೆಯಲ್ಲಿ ವಿವಾದಿತ ಮಸೂದೆ ಅನುಮೋದನೆ ಪಡೆಯುತ್ತಿದ್ದಂತೆ ಪ್ರತಿಭಟನಾಕಾರರು ಗುವಾಹತಿಯಲ್ಲಿ ಭದ್ರತಾ ಸಿಬ್ಬಂದಿ ಜತೆ ನೇರ ಸಂಘರ್ಷಕ್ಕೆ ಇಳಿದರು. ಗುವಾಹತಿ- ಶಿಲ್ಲಾಂಗ್ ಹೆದ್ದಾರಿಯನ್ನು ತಡೆದ ಪ್ರತಿಭಟನಾಕಾರರು ಟೈರುಗಳನ್ನು ಸುಟ್ಟು ರಸ್ತೆ ಹಾಗೂ ರೈಲು ಮಾರ್ಗವನ್ನು ತಡೆದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ದರ್ಬಾಂಗ್‍ನಲ್ಲಿ ರಬ್ಬರ್ ಬುಲೆಟ್ ಹಾಗೂ ಆಶ್ರುವಾಯು ಸಿಡಿಸಿದರು.

ಗುರುವಾರ ಸಂಜೆ 7ರವರೆಗೆ ಅಸ್ಸಾಂ ಬಂದ್‍ಗೆ ಕರೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News