ಅಸ್ಸಾಂನಲ್ಲಿ ಕರ್ಫ್ಯೂ ಹಿನ್ನೆಲೆ: ಅಸ್ಸಾಂ-ಸರ್ವಿಸಸ್ ರಣಜಿ ಪಂದ್ಯ ರದ್ದು

Update: 2019-12-12 08:02 GMT

 ಹೊಸದಿಲ್ಲಿ, ಡಿ.12: ಪೌರತ್ವ ತಿದ್ದುಪಡಿ ಮಸೂದೆಯನ್ನು ಖಂಡಿಸಿ ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ ಅಸ್ಸಾಂನಲ್ಲಿ ಗುರುವಾರ ಕರ್ಫ್ಯೂ ಹೇರಲಾಗಿದ್ದು, ಹೀಗಾಗಿ ಈ ನಗರದಲ್ಲಿ ನಡೆಯುತ್ತಿರುವ ಅಸ್ಸಾಂ ಹಾಗೂ ಸರ್ವಿಸಸ್ ತಂಡಗಳ ನಡುವಿನ ರಣಜಿ ಟ್ರೋಫಿಯ ನಾಲ್ಕನೇ ದಿನದ ಪಂದ್ಯವನ್ನು ರದ್ದುಪಡಿಸಲಾಗಿದೆ.

 ‘‘ರಣಜಿ ಟ್ರೋಫಿಯ ನಾಲ್ಕನೇ ದಿನದ ಪಂದ್ಯವನ್ನು ರದ್ದುಪಡಿಸಲಾಗಿದೆ. ಪಂದ್ಯವನ್ನು ಮುಂದುವರಿಸದಂತೆ ರಾಜ್ಯ ಕ್ರಿಕೆಟ್ ಸಂಸ್ಥೆಗಳು ನಮಗೆ ಸಲಹೆ ನೀಡಿವೆ. ಆಟಗಾರರು ಹಾಗೂ ಪಂದ್ಯದ ಅಧಿಕಾರಿಗಳಿಗೆ ಹೊಟೇಲ್‌ನಲ್ಲೇ ಉಳಿಯುವಂತೆ ಸಲಹೆ ನೀಡಲಾಗಿದೆ. ಈ ಹಂತದಲ್ಲಿ ಆಟಗಾರರು ಹಾಗೂ ಪಂದ್ಯದ ಅಧಿಕಾರಿಗಳ ಸುರಕ್ಷತೆಯು ಅತ್ಯಂತ ಮುಖ್ಯ ಎಂದು ಬಿಸಿಸಿಐ ಕ್ರಿಕೆಟ್ ಚಟುವಟಿಕೆಗಳ ಪ್ರಧಾನ ಪ್ರಬಂಧಕ ಸಾಬಾ ಕರೀಂ ಹೇಳಿದ್ದಾರೆ.

ಅಗರ್ತಲದಲ್ಲಿ ಪ್ರತಿಭಟನೆ ನಡೆಯುತ್ತಿರುವ ಹೊರತಾಗಿಯೂ ಆತಿಥೇಯ ತ್ರಿಪುರಾ ಹಾಗೂ ಜಾರ್ಖಂಡ್ ಮಧ್ಯೆ ನಡೆಯುತ್ತಿರುವ ರಣಜಿ ಪಂದ್ಯ ಮುಂದುವರಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News