ಪೌರತ್ವ ಮಸೂದೆ ಭಾರತದ ಕಲ್ಪನೆಗೆ ವಿರುದ್ಧ: ರಾಜೀನಾಮೆ ನೀಡಿದ ಐಪಿಎಸ್ ಅಧಿಕಾರಿ ಅಬ್ದುರ್ರಹ್ಮಾನ್

Update: 2019-12-12 14:25 GMT

ಮುಂಬೈ,ಡಿ.12: ಪೌರತ್ವ (ತಿದ್ದುಪಡಿ) ಮಸೂದೆಯನ್ನು ವಿರೋಧಿಸಿ ಐಜಿಪಿ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿರುವ ಮಹಾರಾಷ್ಟ್ರ ಕೇಡರ್‌ನ ಐಪಿಎಸ್ ಅಧಿಕಾರಿ ಅಬ್ದುರ್ರಹ್ಮಾನ್ ಅವರು,ಮಸೂದೆಯು ಭಾರತದ ಪರಿಕಲ್ಪನೆಗೆ ವಿರುದ್ಧವಾಗಿದೆ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ತಾರತಮ್ಯದಿಂದ ಕೂಡಿದೆ ಎಂದು ಗುರುವಾರ ಇಲ್ಲಿ ಹೇಳಿದರು.

1995ರ ತಂಡದ ಅಧಿಕಾರಿಯಾದ ಅಬ್ದುರ್ರಹ್ಮಾನ್ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಐಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಿವಾದಾತ್ಮಕ ಮಸೂದೆಯನ್ನು ವಿರೋಧಿಸಿ ಅವರು ಬುಧವಾರ ಜಂಟಿ ಮುಖ್ಯ ಕಾರ್ಯದರ್ಶಿ (ಗೃಹ)ಗಳಿಗೆ ತನ್ನ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,ಮಸೂದೆಯು ಅಸಾಂವಿಧಾನಿಕವಾಗಿದೆ ಮತ್ತು ದೇಶದ ಮೂಲ ಸಾಮಾಜಿಕ ಸ್ವರೂಪಕ್ಕೆ ವಿರುದ್ಧವಾಗಿದೆ. ಅದು ದೇಶವನ್ನು ಜಾತಿ ಮತ್ತು ಧರ್ಮದ ಆಧಾರದಲ್ಲಿ ವಿಭಜಿಸಲಿದೆ. ಅದು ಎಸ್‌ಸಿ/ಎಸ್‌ಟಿಗಳು, ಒಬಿಸಿಗಳು ಮತ್ತು ಮುಸ್ಲಿಮರು ಸೇರಿದಂತೆ ದೇಶದ ಬಡ ಮತ್ತು ವಂಚಿತ ವರ್ಗಗಳಿಗೆ ಅತ್ಯಂತ ಹಾನಿಕಾರಕವಾಗಲಿದೆ. ಆದ್ದರಿಂದ ಪ್ರಜಾಸತ್ತಾತ್ಮಕ ರೀತಿಯಲ್ಲಿ ಈ ಮಸೂದೆಯನ್ನು ವಿರೋಧಿಸುವಂತೆ ಅವರನ್ನು ಕೋರುತ್ತಿದ್ದೇನೆ ಎಂದು ತಿಳಿಸಿದರು.

ಮಸೂದೆಯು ಮುಸ್ಲಿಂ ಸಮುದಾಯದ ವಿರುದ್ಧ ತಾರತಮ್ಯವನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತಿದೆ ಮತ್ತು ಧರ್ಮದ ಆಧಾರದಲ್ಲಿ ಜನರಿಗೆ ಪೌರತ್ವವನ್ನು ನೀಡಲು ಅಥವಾ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದ ಅವರು,ಮಸೂದೆಯು ಸಂವಿಧಾನದ 14,15 ಮತ್ತು 25ನೇ ವಿಧಿಗಳನ್ನು ಉಲ್ಲಂಘಿಸಿದೆ. ಅದು ಸಂವಿಧಾನದ ಗುಣಲಕ್ಷಣಗಳು ಮತ್ತು ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದರು.

 ಎನ್‌ಆರ್‌ಸಿ ಮತ್ತು ಪೌರತ್ವ ಮಸೂದೆ ಎರಡೂ ಒಟ್ಟಿಗೆ ಜಾರಿಗೊಂಡರೆ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದ ಮುಸ್ಲಿಮೇತರರು ನಿರಾಶ್ರಿತರೆಂದು ಘೋಷಿಸಲ್ಪಟ್ಟು ಪೌರತ್ವವನ್ನು ಪಡೆದುಕೊಳ್ಳುತ್ತಾರೆ. ಮುಸ್ಲಿಮರು ಮಾತ್ರ ತಮ್ಮ ಪೌರತ್ವವನ್ನು ಸಾಬೀತುಗೊಳಿಸಬೇಕಾದ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದ ಅಬ್ದುರ್ರಹ್ಮಾನ್,ಮಸೂದೆಯು ಧಾರ್ಮಿಕ ಬಹುತ್ವಕ್ಕೆ ಮತ್ತು ಸಹಿಷ್ಣುತೆಯ ಆಶಯಕ್ಕೆ ವಿರುದ್ಧವಾಗಿದೆ. ಇದು ಜಾರಿಗೊಂಡರೆ ಜನರ ನಡುವಿನ ಭ್ರಾತೃತ್ವವನ್ನು ನಾಶಗೊಳಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News