ವಿರಾಟ್, ಕೆ.ಎಲ್. ರಾಹುಲ್‌ಗೆ ಭಡ್ತಿ

Update: 2019-12-12 17:19 GMT

ಮುಂಬೈ, ಡಿ.12: ಇತ್ತೀಚೆಗೆ ಕೊನೆಗೊಂಡ ವೆಸ್ಟ್‌ಇಂಡೀಸ್ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಮಿಂಚಿದ್ದ ಭಾರತದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಗುರುವಾರ ಬಿಡುಗಡೆಯಾಗಿರುವ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದಾರೆ.

ಕರ್ನಾಟಕದ ಬ್ಯಾಟ್ಸ್ ಮನ್ ರಾಹುಲ್ ಮೂರು ಸ್ಥಾನ ಭಡ್ತಿ ಪಡೆದು ಆರನೇ ಸ್ಥಾನಕ್ಕೇರಿದರು. ಕೊಹ್ಲಿ ಐದು ಸ್ಥಾನ ಮೇಲಕ್ಕೇರಿ ಅಗ್ರ-10ರಲ್ಲಿ ಸ್ಥಾನ ಪಡೆದರು.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ನಡೆದ ವಿಂಡೀಸ್ ವಿರುದ್ಧ ಮೂರನೇ ಹಾಗೂ ಕೊನೆಯ ಟ್ವೆಂಟಿ-20 ಪಂದ್ಯದಲ್ಲಿ ರಾಹುಲ್ 56 ಎಸೆತಗಳಲ್ಲಿ 91 ರನ್ ಗಳಿಸಿದ್ದಾರೆ. ತಂಡ 67 ರನ್‌ಗಳಿಂದ ಜಯ ಸಾಧಿಸಲು ನೆರವಾಗಿದ್ದ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ರಾಹುಲ್ 3 ಪಂದ್ಯಗಳಲ್ಲಿ ಒಟ್ಟು 164 ರನ್ ಗಳಿಸಿದ್ದರು. ಇದೇ ವೇಳೆ, ಕೊಹ್ಲಿ ಅವರು ವಿಂಡೀಸ್ ಎದುರು ಒಟ್ಟು 183 ರನ್ ಗಳಿಸಿದ್ದು, ಸರಣಿಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ರೋಹಿತ್ ಶರ್ಮಾ ರ್ಯಾಂಕಿಂಗ್‌ನಲ್ಲಿ ಹಿನ್ನಡೆ ಕಂಡಿದ್ದು, ಐಸಿಸಿ ರ್ಯಾಂಕಿಂಗ್‌ನಲ್ಲಿ ಇದೀಗ 9ನೇ ಸ್ಥಾನದಲ್ಲಿದ್ದಾರೆ. ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ಸಿಕ್ಸರ್‌ಗಳನ್ನು ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಆಗಿರುವ 32ರ ಹರೆಯದ ರೋಹಿತ್ ವಿಂಡೀಸ್ ವಿರುದ್ಧ 3 ಟ್ವೆಂಟಿ-20 ಪಂದ್ಯಗಳಲ್ಲಿ 94 ರನ್ ಗಳಿಸಿದ್ದಾರೆ.

ರೋಹಿತ್ ಹಾಗೂ ಕೊಹ್ಲಿ ಟ್ವೆಂಟಿ-20ಯಲ್ಲಿ ಅಗ್ರ ರನ್ ಸ್ಕೋರರ್ ಆಗಿದ್ದು, ತಲಾ 2,633 ರನ್ ಗಳಿಸಿ ಅಗ್ರ ಸ್ಥಾನ ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News