ಬಿಡಬ್ಲ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್

Update: 2019-12-12 17:46 GMT

ಹೈದರಾಬಾದ್, ಡಿ.12: ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಬಿಡಬ್ಲುಎಫ್ ವರ್ಲ್ಡ್ ಟೂರ್ ಫೈನಲ್ಸ್‌ನಲ್ಲಿ ಸತತ ಎರಡನೇ ಸೋಲು ಕಂಡಿದ್ದಾರೆ. ಹೀಗಾಗಿ ಸೆಮಿ ಫೈನಲ್ ತಲುಪುವ ಅವರ ಕನಸು ಕ್ಷೀಣಿಸಿದೆ.

ಗುರುವಾರ ಗ್ವಾಂಗ್‌ಝೌನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು ಚೀನಾದ ಚೆನ್ ಯು ಫೀ ವಿರುದ್ಧ 20-22, 21-16, 21-12 ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಸಿಂಧು ಸೆಮಿ ಫೈನಲ್ ಅವಕಾಶವು ಜಪಾನ್‌ನ ಅಕಾನೆ ಯಮಗುಚಿ ಹಾಗೂ ಚೀನಾದ ಹೀ ಬಿಂಗ್‌ಜಿಯಾವೊ ನಡುವಿನ ಮತ್ತೊಂದು ಪಂದ್ಯದ ಫಲಿತಾಂಶವನ್ನು ಅವಲಂಬಿಸಿದೆ.

 ಒಂದು ವೇಳೆ ಯಮಗುಚಿ ಜಯ ಸಾಧಿಸಿದರೆ, ಸಿಂಧು ಟೂರ್ನಮೆಂಟ್‌ನಿಂದ ನಿರ್ಗಮಿಸುತ್ತಾರೆ. ಸಿಂಧು ಅಂತಿಮ-4ರ ಸುತ್ತು ತಲುಪಬೇಕಾದರೆ ಬಿಂಗ್‌ಜಿಯಾವೊ ಜಯ ಸಾಧಿಸಬೇಕು. ಚೆನ್ ಯು ಫೀ ಶುಕ್ರವಾರ ಯಮಗುಚಿ ಅವರನ್ನು ಸೋಲಿಸಬೇಕು. ಸಿಂಧು ತನ್ನ ಕೊನೆಯ ಪಂದ್ಯದಲ್ಲಿ ಬಿಂಗ್‌ಜಿಯಾವೊರನ್ನು ಮಣಿಸಬೇಕು.

ಇಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಸಿಂಧು ಮೊದಲ ಗೇಮ್‌ನ್ನು ಜಯಿಸಿ ಉತ್ತಮ ಆರಂಭ ಪಡೆದಿದ್ದರು. ಆದರೆ, ಎರಡನೇ ಗೇಮ್‌ನಲ್ಲಿ ಚೆನ್ ತಿರುಗೇಟು ನೀಡಿದರು. 3ನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ವಿರಾಮದ ವೇಳೆಗೆ ಸಿಂಧು 11-10 ಮುನ್ನಡೆಯಲ್ಲಿದ್ದರು. ಆದರೆ, ಕೆಲವು ಅನಗತ್ಯ ತಪ್ಪೆಸಗಿದ ಸಿಂಧು ಎದುರಾಳಿ ತಿರುಗೇಟು ನೀಡಲು ಅವಕಾಶ ನೀಡಿದರು. ಆರು ಅಂಕ ಗಳಿಸಿದ ಚೀನಾದ ಆಟಗಾರ್ತಿ 16-11 ಲೀಡ್ ಪಡೆದರು. ದೊಡ್ಡ ಮುನ್ನಡೆಯನ್ನು ಬಿಟ್ಟುಕೊಟ್ಟ ಬಳಿಕ ಸಿಂಧು ತನ್ನ ವೇಗವನ್ನು ಕಳೆದುಕೊಂಡರು. ಅಂತಿಮವಾಗಿ ಚೆನ್ 3ನೇ ಗೇಮ್ ಗೆದ್ದುಕೊಂಡರು.

ಥಾಯ್ಲೆಂಡ್‌ನ ರಚನೊಕ್ ಇಂತನಾನ್‌ರನ್ನು 11-21, 21-18, 21-16 ಗೇಮ್‌ಗಳ ಅಂತರದಿಂದ ಸೋಲಿಸಿದ ಚೈನೀಸ್ ತೈಪೆಯ ತೈ ಝು ಯಿಂಗ್ ‘ಬಿ’ ಗುಂಪಿನಲ್ಲಿ ಸೆಮಿ ಫೈನಲ್ ತಲುಪುವ ಅವಕಾಶ ಜೀವಂತವಾಗಿರಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News