ಉನ್ನತ ಶಿಕ್ಷಣಕ್ಕಾಗಿ ಕಳೆದುಕೊಂಡ ಅವಕಾಶ ವೆಚ್ಚ

Update: 2019-12-12 18:24 GMT

ವಿದ್ಯಾರ್ಥಿಗಳು ಮತ್ತವರ ಪೋಷಕರಲ್ಲಿ ಶೈಕ್ಷಣಿಕ ಆಶಯಗಳು ಕಮರತೊಡಗಿದಂತೆ ಸಾಮಾಜಿಕ ಅಸಮಾನತೆಗಳೂ ಹೆಚ್ಚಾಗತೊಡಗುತ್ತವೆ. ಉನ್ನತಶಿಕ್ಷಣವನ್ನು ಪಡೆಯುವ ಸಾಧ್ಯತೆಯು ಖಾಸಗಿ ವಿಶ್ವವಿದ್ಯಾನಿಲಯಗಳು ಹೇರುವ ಶುಲ್ಕದ ಹೊರೆಯನ್ನು ಭರಿಸುವ ಶಕ್ತಿ ಸಾಮರ್ಥ್ಯವನ್ನೇ ಅವಲಂಬಿಸಿರುತ್ತದೆ. ಖಾಸಗಿ ವಿಶ್ವವಿದ್ಯಾನಿಲಯಗಳು ತುಂಬಾ ದುಬಾರಿಯಾಗಿರುತ್ತವೆ ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ.


ಜಾಗತಿಕ ಮಟ್ಟದಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಬರುತ್ತಿರುವ ಬದಲಾವಣೆಗಳಿಗೆ ತಕ್ಕಂತೆ ಉನ್ನತ ಶಿಕ್ಷಣದಲ್ಲಿನ ಅವಕಾಶಗಳ ವಲಯವೂ ವಿಸ್ತರಿಸುತ್ತಾ ಹೋಗುತ್ತಿರುವುದು ಆಸಕ್ತಿದಾಯಕವಾಗಿದೆ. ಈ ವಿಸ್ತರಣೆಯ ಭಾಗವಾಗಿ ಇಂದು ಭಾರತದ ವಿದ್ಯಾರ್ಥಿಗಳು ಜಗತ್ತಿನ ಮಟ್ಟದಲ್ಲಿ ಹೆಸರು ಮಾಡಿರುವ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡಬಹುದಾಗಿದೆ. ಅದೇರೀತಿ ದೇಶದಲ್ಲಿ ಹೆಚ್ಚಾಗುತ್ತಿರುವ ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಸಮರ್ಥ ಅಧ್ಯಾಪಕ ಸಿಬ್ಬಂದಿ ಹೊಸಹೊಸ ಕೋರ್ಸುಗಳನ್ನು ಕಲಿಸುವ ಮೂಲಕ ಮತ್ತಷ್ಟು ಅವಕಾಶಗಳನ್ನು ತೆರೆಯುತ್ತಿರುವಂತೆ ಕಾಣುತ್ತಿದೆ. ಆದರೆ ಉನ್ನತ ಶಿಕ್ಷಣದಲ್ಲಿ ಅವಕಾಶಗಳ ವಿಸ್ತರಣೆಯೆಂದು ಕಂಡುಬರುತ್ತಿರುವ ವಿದ್ಯಮಾನಗಳು ಅದೇ ಸಮಯದಲ್ಲಿ ಹಲವರನ್ನು ಹೊರಗೆ ದೂಡುತ್ತಲಿರುವುದು ಜಗತ್ತಿನಾದ್ಯಂತ ಕಂಡುಬರುತ್ತಿರುವ ಸಂಗತಿಯೂ ಆಗಿದೆ. ವಿದ್ಯಾರ್ಥಿಗಳು ಮತ್ತವರ ಪೋಷಕರಲ್ಲಿ ಶೈಕ್ಷಣಿಕ ಆಶಯಗಳು ಕಮರತೊಡಗಿದಂತೆ ಸಾಮಾಜಿಕ ಅಸಮಾನತೆಗಳೂ ಹೆಚ್ಚಾಗತೊಡಗುತ್ತವೆ. ಉನ್ನತಶಿಕ್ಷಣವನ್ನು ಪಡೆಯುವ ಸಾಧ್ಯತೆಯು ಖಾಸಗಿ ವಿಶ್ವವಿದ್ಯಾನಿಲಯಗಳು ಹೇರುವ ಶುಲ್ಕದ ಹೊರೆಯನ್ನು ಭರಿಸುವ ಶಕ್ತಿ ಸಾಮರ್ಥ್ಯವನ್ನೇ ಅವಲಂಬಿಸಿರುತ್ತದೆ. ಖಾಸಗಿ ವಿಶ್ವವಿದ್ಯಾನಿಲಯಗಳು ತುಂಬಾ ದುಬಾರಿಯಾಗಿರುತ್ತವೆ ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ.

ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಸಮಾಜದ ದುರ್ಬಲ ವರ್ಗಗಳ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಕಲ್ಪಿಸುವ ಮೂಲಕ ಉನ್ನತ ಶಿಕ್ಷಣದಲ್ಲಿ ಸಂಭವಿಸುತ್ತಿರುವ ಈ ಪಕ್ಷಪಾತಿ ಬೆಳವಣಿಗೆಗಳಿಂದ ಆಗುವ ಅನ್ಯಾಯವನ್ನು ಸರಿಪಡಿಸಬೇಕೆಂದು ನಿರೀಕ್ಷಿಸಲಾಗಿತ್ತು. ಹೀಗಾಗಿ ಸಾರ್ವಜನಿಕ ವಿಶ್ವವಿದ್ಯಾನಿಲಯಗಳಲ್ಲಿ ಅಸ್ತಿತ್ವದಲ್ಲಿರುವ ರಿಯಾಯಿತಿ ದರದ ಶುಲ್ಕ ಸ್ವರೂಪಗಳು ದುರ್ಬಲ ವರ್ಗಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶವನ್ನಾದರೂ ಪಡೆಯಲು ಸಾಧ್ಯಗೊಳಿಸುವ ಸಾಧನವಾಗಿಬಿಟ್ಟಿದೆ. ದುರ್ಬಲ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳಿಗೆ ದೊರೆಯುವ ಉನ್ನತ ಶಿಕ್ಷಣದ ಪ್ರವೇಶದಲ್ಲಿ ಆ ಅವಕಾಶವನ್ನು ಒಂದು ಸಂಪತ್ತನ್ನಾಗಿ ಮಾಡಿಕೊಳ್ಳಬೇಕಾದ ಹೆಚ್ಚುವರಿ ನೈತಿಕ ಹೊಣೆಗಾರಿಕೆಯೂ ಸೇರಿಕೊಂಡಿರುತ್ತದೆ. ಹೀಗಾಗಿ ಅಂತಹ ವಿದ್ಯಾರ್ಥಿಗಳು ತಮ್ಮ ತಂದೆತಾಯಂದಿರ ಆಶಯಗಳನ್ನು ಪೂರೈಸಬೇಕಾದ ಆಳವಾದ ಹೊಣೆಗಾರಿಕೆಯ ಭಾವದ ಜೊತೆಗೆ ಒಂದು ಸೃಜನಶೀಲ ಕಸುವಿನ ವ್ಯಕ್ತಿಯಾಗಿ ಹೊರಹೊಮ್ಮುವ ಭರವಸೆಯನ್ನೂ ರೂಢಿಸಿಕೊಂಡಿರುತ್ತಾರೆ. ಈ ಒಂದು ಪರಿವರ್ತನಾವಾದಿ ಅರ್ಥದಲ್ಲಿ ಉನ್ನತ ಶಿಕ್ಷಣವು ಸಂಪ್ರದಾಯವಾದಿ ಪ್ರಭಾವಗಳು ಅವರ ಮನಸ್ಸತ್ವವನ್ನು ರೂಪುಗೊಳಿಸದ ರೀತಿಯಲ್ಲಿ ಚಿಂತನಶೀಲ ಬದುಕಿನ ಅವಕಾಶಗಳ ಭರವಸೆಯನ್ನು ಒದಗಿಸಬಹುದಾಗಿದೆ. ಹೀಗಾಗಿ ಉನ್ನತ ಶಿಕ್ಷಣದ ಪ್ರವೇಶದ ವೆಚ್ಚವನ್ನು ಹೆಚ್ಚಿಸುವ ಮೂಲಕ ಸೃಜನಶೀಲ ಮನಸ್ಸುಗಳ ಬೆಳವಣಿಗೆಯ ಅವಕಾಶವನ್ನೂ ನಿರಾಕರಿಸಿದಂತಾಗುತ್ತದೆ.

ದುರ್ಬಲ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ವಿದ್ವತ್ತು ಮತ್ತು ಸಾಮಾಜಿಕ ಜವಾಬ್ದಾರಿಯೆಂಬ ಎರಡೆರಡು ಹೊಣೆಗಾರಿಕೆಯನ್ನು ನಿಭಾಯಿಸಬೇಕಾದ ನೈತಿಕ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಅಂತಹ ವಿದ್ಯಾರ್ಥಿಗಳು ಆ ಪರಿವರ್ತನೆಯನ್ನು ಆಗುಮಾಡಲು ರಿಯಾಯಿತಿ ದರದ ಶುಲ್ಕ ವ್ಯವಸ್ಥೆಯನ್ನು ನೆಚ್ಚಿಕೊಂಡಿರುತ್ತಾರೆ. ಮತ್ತೊಂದು ಕಡೆ ಎಟಕುವ ಮಟ್ಟದ ಶುಲ್ಕ ಸ್ವರೂಪಗಳು ಅತ್ಯಗತ್ಯವಾದ ಮತ್ತು ಆರಂಭಿಕ ಪೂರ್ವಶರತ್ತಾಗಿದ್ದರೂ ಪ್ರಾಯಶಃ ಅದೇ ಸಕಲವೂ ಅಲ್ಲ. ಅಷ್ಟು ಮಾತ್ರದಿಂದಲೇ ಒಬ್ಬ ವ್ಯಕ್ತಿಯು ಪರಿಪೂರ್ಣ ವಿದ್ಯಾರ್ಥಿಯಾಗಿಬಿಡುವುದಿಲ್ಲ. ಒಬ್ಬ ವಿದ್ಯಾರ್ಥಿಯು ಸಂಪೂರ್ಣವಾದ ಕಲಿಕೆಯನ್ನು ಪಡೆದುಕೊಳ್ಳುವುದು ಬೌದ್ಧಿಕ ಮತ್ತು ಶೈಕ್ಷಣಿಕ ಸಾಮರ್ಥ್ಯಗಳನ್ನು ಗಳಿಸಿಕೊಳ್ಳಬಲ್ಲ ಸಾಮರ್ಥ್ಯವನ್ನೂ ಸಹ ಅವಲಂಬಿಸಿರುತ್ತದೆ. ಕೆಲವು ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ಗಳಲ್ಲಿರುವ ಶೈಕ್ಷಣಿಕ ವಾತಾವರಣವು ಕೆಲವು ವರ್ಗದ ವಿದ್ಯಾರ್ಥಿಗಳು ತಮ್ಮ ಬೌದ್ಧಿಕ ಹಾಗೂ ಪ್ರತಿಪಾದನಾ ಸಾಮರ್ಥ್ಯಗಳನ್ನು ಮುಕ್ತವಾಗಿ ಬೆಳಸಿಕೊಳ್ಳಲು ಪೂರಕವಾಗಿಲ್ಲ. ಇದಕ್ಕೆ ಕಾರಣ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಪರಸ್ಪರ ಆರೋಗ್ಯಕರ ವಿನಿಮಯ ಸಂಬಂಧಗಳು ಇಲ್ಲದಿರುವುದು. ಇದು ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯದ ಬಗ್ಗೆ ಶೈಕ್ಷಣಿಕ ಗೌರವವು ಇಲ್ಲದಿರುವುದನ್ನು ಸೂಚಿಸುತ್ತದೆ. ಅಂತಹ ತಾರತಮ್ಯಕ್ಕೆ ಗುರಿಯಾಗುವ ವಿದ್ಯಾರ್ಥಿಗಳು ಹಲವಾರು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಅಂತಿಮವಾಗಿ ಶಿಕ್ಷಣದಿಂದ ಹೊರಬೀಳುತ್ತಾರೆ.

ದೇಶದ ಲಾ ಸ್ಕೂಲುಗಳಲ್ಲಿ, ಐಐಟಿಗಳಲ್ಲಿ ಮತ್ತು ಐಐಎಂಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಅನುಭವಗಳು ಈ ಬಗೆಯ ದಮನಕಾರಿ ಅಸಮಾನತೆಯ ನಿಚ್ಚಳ ಉದಾಹರಣೆಗಳಾಗಿವೆ. ತಮ್ಮ ಬೌದ್ಧಿಕ ಸಾಮರ್ಥ್ಯದ ಬಗ್ಗೆ ಆರೋಗ್ಯಕರ ಮೆಚ್ಚುಗೆಯ ವಿನಿಮಯವಿಲ್ಲದ ವಾತಾವರಣವು ಕೆಲವು ವಿದ್ಯಾರ್ಥಿಗಳನ್ನು ಆತ್ಮಹತ್ಯೆ ಮಾಡಿಕೊಳ್ಳಲೂ ದೂಡುತ್ತದೆ. ಈ ಬಗೆಯ ಪ್ರತ್ಯೇಕೀಕರಣ ಅಸಮಾನತೆಯ ತಾರಕ ಸ್ವರೂಪವಾಗಿದೆ: ಏಕೆಂದರೆ ಅದು ದಮನಕಾರಿ ಲಕ್ಷಣಗಳನ್ನು ಹೊಂದಿರುತ್ತದೆ. ಇಂತಹ ತೀವ್ರ ಸಂವೇದನಾಶೂನ್ಯತೆಯ ಸಂದರ್ಭದಿಂದಾಗಿಯೇ ಕ್ಯಾಂಪಸ್‌ಗಳಲ್ಲಿ ಜಾತಿ ಮತ್ತು ಸಮುದಾಯ ಆಧಾರಿತ ಗುಂಪುಗಳು ರೂಪುಗೊಳ್ಳುತ್ತಿರುವುದನ್ನೂ ಸಹ ಗಮನಿಸಬಹುದಾಗಿದೆ.

ವಿಶ್ವವಿದ್ಯಾನಿಲಯಗಳು ಜ್ಞಾನವನ್ನು ಉತ್ಪಾದಿಸುವ ಕ್ಷೇತ್ರವಾಗಿದ್ದು ಜಾತಿ ಮತ್ತು ಸಮುದಾಯಗಳ ಬಲೆಗೆ ಬೀಳದಂತಹ ವಿವೇಚನಾವಕಾಶಗಳನ್ನು ಒದಗಿಸಬೇಕೆಂದು ನಿರೀಕ್ಷಿಸಲಾಗುತ್ತದೆ. ವಿಶ್ವವಿದ್ಯಾನಿಲಯಗಳಲ್ಲಿ ಜ್ಞಾನಾಭಿವೃದ್ಧಿಯ ಉಪಕರಣವಾಗಿ ಬೆಸೆದುಕೊಂಡಿರುವ ತರ್ಕ-ಸಿದ್ಧಾಂತದ ಸಾರ್ವಜನಿಕ ಬಳಕೆಯಿಂದ ವಿದ್ಯಾರ್ಥಿಗಳು ತಮ್ಮ ಮುನ್ನೋಟವನ್ನು ವಿಸ್ತರಿಸಿಕೊಳ್ಳುತ್ತಾರೆ. ಈ ಮುನ್ನೋಟವು ಅಂತಹ ಗುಂಪುಗಳ ಅಭಿಲಾಷೆಗಳ ರಚನೆಯಲ್ಲೇ ಅಂತರ್ಗತವಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಈ ಬಗೆಯಲ್ಲಿ ಸಾರ್ವತ್ರಿಕವಾಗಿ ಅಥವಾ ಅಮೂರ್ತ ವಿದ್ಯಾರ್ಥಿ ವರ್ಗವಾಗಿ ವಿಸ್ತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ದಲಿತ ವಿದ್ಯಾರ್ಥಿಗಳು ಸದಾ ದಲಿತ ವಿದ್ಯಾರ್ಥಿಗಳಾಗಿಯೇ ಉಳಿದುಕೊಂಡು ಬಿಡುತ್ತಾರೆ ಮತ್ತು ಆ ಕಾರಣಕ್ಕಾಗಿಯೇ ಪೂರಕ ತರಗತಿಗಳಿಗೂ ಹಾಜರಾಗಬೇಕಾಗುತ್ತದೆ. ಈ ಬಗೆಯ ವಿಶೇಷ ತರಬೇತಿಗಳು ಒಂದು ಕಳಂಕದೊಂದಿಗೆ ದೊರಕುತ್ತದೆ. ಅಂತಹ ವಿದ್ಯಾರ್ಥಿಗಳು ತಮ್ಮ ಬಗ್ಗೆ ತೋರುವ ಈ ವಿಶೇಷ ಧೋರಣೆಗಳಿಗೆ ಸಿದ್ಧವಾಗಿರುವುದಿಲ್ಲ. ಒಂದು ಹಂತದಲ್ಲಿ ಉನ್ನತ ಶಿಕ್ಷಣದಲ್ಲಿನ ಅವಕಾಶಗಳೆಂಬುದು ಶುಲ್ಕ ಸ್ವರೂಪಗಳ ರಾಜಕೀಯ ಆರ್ಥಿಕತೆಗೆ ಸಂಬಂಧಪಟ್ಟ ವಿಷಯವಾಗಿದೆ. ಮತ್ತೊಂದು ಹಂತದಲ್ಲಿ ಅದೊಂದು ಆಳವಾದ ತಾತ್ವಿಕ-ನೈತಿಕ ಪ್ರಶ್ನೆಯೂ ಆಗಿದೆ.


ಕೃಪೆ: Economic and Political Weekly

Writer - ಗೋಪಾಲ್ ಗುರು

contributor

Editor - ಗೋಪಾಲ್ ಗುರು

contributor

Similar News