ನಿವೃತ್ತಿ ಹಿಂಪಡೆದ ಡ್ವೇಯ್ನ್ ಬ್ರಾವೊ

Update: 2019-12-13 09:33 GMT

ಗಯಾನ, ಡಿ.13: ವೆಸ್ಟ್‌ಇಂಡೀಸ್ ಆಲ್‌ರೌಂಡರ್ ಡ್ವೇಯ್ನ್ ಬ್ರಾವೊ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರವನ್ನು ಹಿಂಪಡೆದಿದ್ದಾರೆ. ಟ್ವೆಂಟಿ-20 ಪಂದ್ಯಕ್ಕೆ ಲಭ್ಯವಿರುವುದಾಗಿ ಘೋಷಿಸಿದ್ದಾರೆ.

 ಬ್ರಾವೊ 2018ರ ಅಕ್ಟೋಬರ್‌ನಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. 2016ರ ಸೆಪ್ಟಂಬರ್‌ನಲ್ಲಿ ಪಾಕಿಸ್ತಾನ ವಿರುದ್ಧ ಕೊನೆಯ ಬಾರಿ ವಿಂಡೀಸ್ ಜರ್ಸಿ ಧರಿಸಿ ಟ್ವೆಂಟಿ-20 ಪಂದ್ಯವನ್ನು ಆಡಿದ್ದರು.

ರಾಷ್ಟ್ರೀಯ ತಂಡದಿಂದ ದೂರವಾಗಿದ್ದರೂ 36ರ ಹರೆಯದ ಬ್ರಾವೊ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಬಿಗ್ ಬ್ಯಾಶ್ ಲೀಗ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಟ್ವೆಂಟಿ-20 ಫ್ರಾಂಚೈಸಿಗಳ ಪರ ಕ್ರಿಕೆಟ್ ಆಡುವುದನ್ನು ಮುಂದುವರಿಸಿದ್ದರು.

 ‘‘ವಿಶ್ವದೆಲ್ಲೆಡೆ ಇರುವ ನನ್ನ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ನಾನು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಇಂದು ವಾಪಸಾಗುತ್ತಿದ್ದೇನೆ ಎಂದು ಈ ಮೂಲಕ ದೃಢಪಡಿಸುತ್ತಿದ್ದೇನೆ. ನನ್ನ ಈ ಮಹತ್ವದ ಘೋಷಣೆಯು ಆಡಳಿತಾತ್ಮಕ ಮಟ್ಟದಲ್ಲಿ ದೊಡ್ಡ ಬದಲಾವಣೆಯಾಗುವುದರಲ್ಲಿ ಸಂಶಯವಿಲ್ಲ’’ ಎಂದು ಪತ್ರಿಕಾಹೇಳಿಕೆಯೊಂದರಲ್ಲಿ ಬ್ರಾವೊ ತಿಳಿಸಿದರು.

‘‘ನಮ್ಮ ತಂಡದಲ್ಲಿ ಯುವಕರು ಹಾಗೂ ಸಾಕಷ್ಟು ಅನುಭವವಿರುವ ಪೊಲಾರ್ಡ್, ಸಿಮೊನ್ಸ್ ಹಾಗೂ ಜೇಸನ್ ಹೋಲ್ಡರ್‌ರಂತಹ ಆಟಗಾರರಿದ್ದಾರೆ. ನಾನು ತಂಡದಲ್ಲಿ ಸಕಾರಾತ್ಮಕ ಬದಲಾವಣೆ ತರುವ ವಿಶ್ವಾಸದಲ್ಲಿದ್ದೇನೆ’’ ಎಂದು 2012 ಹಾಗೂ 2016ರಲ್ಲಿ ಎರಡು ಬಾರಿ ಟ್ವೆಂಟಿ-20 ವಿಶ್ವಕಪ್ ಜಯಿಸಿದ್ದ ವೆಸ್ಟ್‌ಇಂಡೀಸ್ ತಂಡದ ಭಾಗವಾಗಿದ್ದ ಬ್ರಾವೊ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News