ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸುಪ್ರೀಂನಲ್ಲಿ ಕಾನೂನು ಹೋರಾಟ: ಮೌಲಾನ ತನ್ವೀರ್ ಹಾಶ್ಮಿ

Update: 2019-12-19 06:00 GMT

ಬೆಂಗಳೂರು, ಡಿ.13: ಕೇಂದ್ರ ಸರಕಾರವು ದೇಶದ ಜನ ತಮ್ಮ ಪೌರತ್ವವನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಜಾರಿಗೆ ತರಲು ಮುಂದಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ-2019ರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ಜಮಾತೆ ಅಹ್ಲೆ ಸುನ್ನತ್ ಕರ್ನಾಟಕದ ಅಧ್ಯಕ್ಷ ಮೌಲಾನ ಸಯ್ಯದ್ ತನ್ವೀರ್ ಹಾಶ್ಮಿ ತಿಳಿಸಿದರು.

ಶುಕ್ರವಾರ ಆರ್.ಟಿ.ನಗರದಲ್ಲಿರುವ ಜಮಾತೆ ಅಹ್ಲೆ ಸುನ್ನತ್ ಕರ್ನಾಟಕದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನದ ಕಲಂ 14, 15 ಹಾಗೂ 21ರ ವಿರುದ್ಧವಾಗಿದೆ ಎಂದರು.

ನಮ್ಮ ದೇಶವು ಧರ್ಮದ ಆಧಾರದಲ್ಲಿ ಯಾರಿಗೂ ಪೌರತ್ವ ನೀಡುವುದಿಲ್ಲ ಎಂಬುದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ನಾವು ಭಾರತೀಯರು ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇವೆ. ಆದರೆ, ಈ ಕಾನೂನು ಮುಸ್ಲಿಮರ ವಿರುದ್ಧವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಅವರು ಹೇಳಿದರು.

ನಮ್ಮ ದೇಶದ ಸಂವಿಧಾನ ಜಾತ್ಯತೀತ ಹಾಗೂ ಪ್ರಜಾಪ್ರಭುತ್ವವನ್ನು ಪ್ರತಿನಿಧಿಸುತ್ತದೆ. ಸಂವಿಧಾನಕ್ಕೆ ಈ ಕಾನೂನಿನ ಮೂಲಕ ಬಹುದೊಡ್ಡ ಗಂಡಾಂತರ ತರುವ ಕೆಲಸವಾಗಿದೆ. ಈ ಕಾನೂನು ಜಾರಿಯಾಗುವ ದಿನ ದೇಶದ ಪಾಲಿಗೆ ಕರಾಳ ದಿನವಾಗಲಿದೆ. ಆದುದರಿಂದ, ಈ ಕಾನೂನನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ತನ್ವೀರ್ ಹಾಶ್ಮಿ ತಿಳಿಸಿದರು.

ಪೌರತ್ವ ತಿದ್ದುಪಡಿ ಮಸೂದೇ ಅಷ್ಟೇ ಅಲ್ಲ, ಎನ್‌ಆರ್‌ಸಿ, ಎನ್‌ಪಿಆರ್ ಅನ್ನು ನಾವು ಖಂಡಿಸುತ್ತೇವೆ. ಈ ದೇಶದಲ್ಲಿ ಧರ್ಮದ ಆಧಾರದಲ್ಲಿ ಇಂತಹ ಕೆಲಸಗಳು, ಚಟುವಟಿಕೆಗಳು ಆರಂಭವಾದರೆ ಕೇವಲ ಮುಸ್ಲಿಮರಷ್ಟೇ ಜಾಗೃತರಾಗುವುದಿಲ್ಲ, ಜಾತ್ಯತೀತ ಮನಸ್ಥಿತಿ ಹೊಂದಿರುವವರು ಜಾಗೃತರಾಗುತ್ತಾರೆ. ದೊಡ್ಡ ಮಟ್ಟದಲ್ಲಿ ಕೇಂದ್ರ ಸರಕಾರದ ನಡವಳಿಕೆ ವಿರುದ್ಧ ಪ್ರತಿಭಟನೆಗಳು ನಡೆಯುತ್ತವೆ ಎಂದು ಅವರು ಹೇಳಿದರು..

ಉಲಮಾಗಳು, ಬುದ್ಧಿಜೀವಿಗಳು, ಸಂಘ ಸಂಸ್ಥೆಗಳು, ಜಾತ್ಯತೀತ ಮನಸ್ಥಿತಿಯ ಎಲ್ಲ ನಾಗರಿಕರು ಸೇರಿ ನಿರಂತರವಾಗಿ ಕೇಂದ್ರ ಸರಕಾರದ ಈ ಧೋರಣೆ ವಿರುದ್ಧ ಹೋರಾಟ ಮಾಡಬೇಕು. ದೇಶದ ಸಂವಿಧಾನ ಉಳಿಸಲು ನಾವು ಎಲ್ಲರೂ ಚಳವಳಿಯನ್ನು ಮಾಡಬೇಕಿದೆ. ಈ ಕಾನೂನು ಹಿಂಪಡೆಯಲು ಒತ್ತಾಯಿಸಲು ಮತ್ತೊಂದು ಸ್ವಾತಂತ್ರ ಹೋರಾಟದ ಮಾದರಿಯಲ್ಲಿ ಚಳವಳಿ ನಡೆಯಬೇಕು ಎಂದು ತನ್ವೀರ್ ಹಾಶ್ಮಿ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News