ಪೌರತ್ವ ಮಸೂದೆಯಿಂದ ಮಾನವಹಕ್ಕು ಉಲ್ಲಂಘನೆ: ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಆಕ್ರೋಶ

Update: 2019-12-19 06:02 GMT

ಹೊಸದಿಲ್ಲಿ, ಡಿ.13: ಸಂಸತ್‌ನಲ್ಲಿ ಬುಧವಾರ ಅಂಗೀಕರಿಸಲಾದ ವಿವಾದಾತ್ಮಕ ಪೌರತ್ವ ತಿದ್ದುಪಡಿ ವಿಧೇಯಕವನ್ನು ಜಾಗತಿಕ ಮಾನವಹಕ್ಕುಗಳ ಸಂಘಟನೆ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ತೀವ್ರವಾಗಿ ಖಂಡಿಸಿದೆ ಹಾಗೂ ಈ ವಿಧೇಯಕವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಅದು ಮೋದಿ ಸರಕಾರವನ್ನು ಆಗ್ರಹಿಸಿದೆ.

ಈ ವಿದ್ವೇಷಕಾರಿಯಾದ ಕಾನೂನು. ಧರ್ಮದ ಆಧಾರದಲ್ಲಿ ತಾರತಮ್ಯವೆಸಗುವುದನ್ನು ಸಕ್ರಮಗೊಳಿಸಲಿದ್ದು, ಭಾರತದ ಸಂವಿಧಾನ ಹಾಗೂ ಅಂತಾರಾಷ್ಟ್ರೀಯ ಮಾನವಕ್ಕುಗಳ ಕಾನೂನುಗಳ ಸ್ಪಷ್ಟ ಉಲ್ಲಂಘನೆ ಇದಾಗಿದೆ ಎಂದವರು ಹೇಳಿದ್ದಾರೆ.

ವಿವಾದಾತ್ಮಕ ಪೌರತ್ವ ತಿದ್ದುಪಡಿ ವಿಧೇಯಕದ ವಿರುದ್ಧ ವಿಶೇಷವಾಗಿ ಈಶಾನ್ಯ ಭಾರತ ಸೇರಿದಂತೆ ದೇಶಾದ್ಯಂತ ವ್ಯಾಪಕ ಪ್ರತಿಭಟನೆಯನ್ನು ಭುಗಿಲೆದ್ದಿದೆ.

ಎಲ್ಲರನ್ನು ಒಳಪಡಿಸುವಿಕೆಯೇ ವಿಧೇಯಕದ ಗುರಿಯೆಂದು ಘೋಷಿಸ ಲಾಗಿದ್ದರೂ, ಅದರ ಸಂರಚನೆ ಹಾಗೂ ಉದ್ದೇಶವು ಬೇರ್ಪಡಿಸುವಿಕೆ ಯಾಗಿದೆಯೆಂದು ಆ್ಯಮ್ನೆಸ್ಟಿ ಟೀಕಿಸಿದೆ.

ನಿರಾಶ್ರಿತರನ್ನು ಸ್ವಾಗತಿಸುವುದು ಒಂದು ಸಕಾರಾತ್ಮಕವಾದ ಹೆಜ್ಜೆಯಾಗಿದೆ. ಆದರೆ ದೌರ್ಜನ್ಯಕ್ಕೊಳಗಾದ ಮುಸ್ಲಿಮರು ಹಾಗೂ ಇತರ ಸಮುದಾಯಗಳಿಗೆ ಅವರ ಧರ್ಮದ ಕಾರಣದಿಂದಾಗಿ ಭಾರತದಂತಹ ಜಾತ್ಯತೀತ ದೇಶದಲ್ಲಿ ಬಾಗಿಲು ಗಳನ್ನು ಮುಚ್ಚಿರುವುದು, ಭಯಹುಟ್ಟಿಸುವಂತಹದ್ದಾಗಿದೆ ಹಾಗೂ ವಿದ್ವೇಷಕಾರಿಯಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಕಾರ್ಯಕಾರಿ ನಿರ್ದೇಶಕ ಅವಿನಾಶ್ ಕುಮಾರ್ ತಿಳಿಸಿದ್ದಾರೆ.

ಭಾರತವು ಸಾರ್ವತ್ರಿಕ ಹಕ್ಕುಗಳನ್ನು ಒಪ್ಪಿಕೊಂಡಿರುವುದರಿಂದ ಅದಕ್ಕೆ ಅಂತಾರಾಷ್ಟ್ರೀಯ ಬಾಧ್ಯತೆಯೂ ಇದೆ ಎಂದು ಅವರು ನೆನಪಿಸಿದರು. ಮಾನವಹಕ್ಕುಗಳ ಸಾರ್ವತ್ರಿಕ ಘೋಷಣೆ ಹಾಗೂ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಕುರಿತ ಅಂತಾರಾಷ್ಟ್ರೀಯ ಒಡಂಬಡಿಕೆಗೆ ಭಾರತವು ಬಾಧ್ಯತೆಯನ್ನು ಹೊಂದಿರುವುದರಿಂದ ಪೌರತ್ವ ತಿದ್ದುಪಡಿ ಕಾಯ್ದೆಯು ಸಂಪೂರ್ಣ ಪ್ರಮಾದಕರವಾಗಿದೆ ಎಂದು ಅವಿನಾಶ್ ಹೇಳಿದ್ದಾರೆ. ಪೌರತ್ವ ಕಾಯ್ದೆಗೆ ಮಾಡಲಾದ ತಿದ್ದುಪಡಿಗಳ ಭಾರತೀಯ ಸಂವಿಧಾನದ 14ನೇ ವಿಧಿಗೆ ವಿರುದ್ಧವಾದುದಾಗಿದೆ ಎಂದು ಅವರು ಗಮನಸೆಳೆದಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯು ತಾರತಮ್ಯದಿಂದ ಕೂಡಿದೆಯೆಂದು ಗಮನಸೆಳೆದಿರುವ ಅವರು ಶ್ರೀಲಂಕಾ ತಮಿಳರನ್ನು ಕೂಡಾ ಕಾಯ್ದೆಯ ವ್ಯಾಪ್ತಿಗೆ ತರಲಾಗಿಲ್ಲವೆಂದು ಹೇಳಿದ್ದಾರೆ. ಭಾರೀ ಸಂಖ್ಯೆಯ ಶ್ರೀಲಂಕಾ ತಮಿಳರು ಭಾರತದಲ್ಲಿ ಮೂರು ದಶಕಗಳಿಂದ ಭಾರತದಲ್ಲಿ ನಿರಾಶ್ರಿತ ಶಿಬಿರಗಳಲ್ಲಿ ಇದ್ದರೂ ಅವರನ್ನು ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಹೊರಗಿಡಲಾಗಿದೆ ಎಂದು ಅವರು ಹೇಳಿದ್ದಾರೆ.

ವಿಶ್ವದ ಅತ್ಯಂತ ದೌರ್ಜನ್ಯಕ್ಕೊಳಗಾದ ಸಮುದಾಯವೆಂದು ಬಣ್ಣಿಸಲಾದ ಮ್ಯಾನ್ಮಾರ್‌ನ ರೋಹಿಂಗ್ಯ ಮುಸ್ಲಿಮರನ್ನು ಕೂಡಾ ಈ ಕಾಯ್ದೆಯು ಒಳಗೊಂಡಿಲ್ಲ ಎಂದು ಅವಿನಾಶ್ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಅಹ್ಮದಿಯರು ಹಾಗೂ ಬಾಂಗ್ಲಾದೇಶದಲ್ಲಿ ಬಿಹಾರಿ ಮುಸ್ಲಿಮರು ಮತ್ತು ಪಾಕಿಸ್ತಾನದಲ್ಲಿ ಹಝಾರಾಗಳು ಹಲವಾರು ವರ್ಷಗಳಿಂದ ವ್ಯವಸ್ಥಿತವಾಗಿ ದಮನಕ್ಕೊಳಗಾಗಿದ್ದು ಅವರ ಗೋಳನ್ನು ಕೂಡಾ ಭಾರತ ಸರಕಾರ ಕಡೆಗಣಿಸಿದೆಯೆಂದು ಅವಿನಾಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಸ್ಸಾಂನಲ್ಲಿ ಎನ್‌ಆರ್‌ಸಿ ಪ್ರಕ್ರಿಯೆಯ ಮೂಲಕ 19 ಲಕ್ಷ ಜನರಿಗೆ ಪೌರತ್ವವನ್ನು ನಿರಾಕರಿಸಲಾಗಿದೆ. ಭಾರತ ಸರಕಾರವು ತಾನು ಯಾವುದೇ ತಾರತಮ್ಯವೆಸಗುತ್ತಿಲ್ಲವೆಂದು ಹೇಳಿಕೊಳ್ಳುತ್ತಿದೆಯಾದರೂ, ಪೌರತ್ವ ಕಾಯ್ದೆಗೆ ಮಾಡಲಾದ ತಿದ್ದುಪಡಿಗಳು, ಮುಸ್ಲಿಮರ ವಿರುದ್ಧ ಎನ್‌ಆರ್‌ಸಿ ಪ್ರಕ್ರಿಯೆಯನ್ನು ನಡೆಸುವುದಕ್ಕೆ ಬಲ ತುಂಬಿವೆ ಎಂದು ಅವಿನಾಶ್ ಕುಮಾರ್ ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News