ಭಾರತದ ಅಭಿವೃದ್ಧಿಗೆ ತಂತ್ರಜ್ಞಾನವೇ ಮೂಲ ಕಾರಣ: ಕ್ರಿಸ್ ಗೋಪಾಲಕೃಷ್ಣನ್

Update: 2019-12-13 16:31 GMT

ಬೆಂಗಳೂರು, ಡಿ. 13: 1980ರಲ್ಲಿ ಕೇವಲ 1.80 ಬಿಲಿಯನ್ ಡಾಲರ್‌ನಷ್ಟು ಆರ್ಥಿಕತೆಯನ್ನು ಹೊಂದಿದ್ದ ಭಾರತ 2019ರಲ್ಲಿ 2.8 ಬಿಲಿಯನ್ ಆರ್ಥಿಕತೆಯನ್ನು ಹೊಂದಲು ಪ್ರಮುಖ ಕಾರಣ ತಂತ್ರಜ್ಞಾನ. ತಂತ್ರಜ್ಞಾನದ ಬೆಳವಣಿಗೆಯಿಂದಾಗಿಯೆ ದೇಶ ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದು ಸಿಐಐ ಎಐ ಫೋರಂ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ನಗರದ ಹೊರ ವಲಯದ ಅಂತರ್‌ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜನೆಗೊಂಡಿರುವ ಎಕ್ಸ್‌ಕಾನ್-2019 ಸಮಾವೇಶದಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಐಒಟಿ ಆಟೋಮೇಶನ್ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಎಕ್ಸ್‌ಕಾನ್ 2019ರಂತಹ ವೇದಿಕೆಗಳು ನಮಗೆ ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನವನ್ನು ಮುನ್ನಡೆಸಲು ಸೂಕ್ತ ಅವಕಾಶವನ್ನು ಒದಗಿಸಿಕೊಡುತ್ತವೆ ಎಂದರು.

ಎಐ ಐಒಟಿ ರೊಬೊಟಿಕ್ಸ್ ಟಾಸ್ಕ್‌ಫೋರ್ಸ್‌ನ ಅಧ್ಯಕ್ಷ ಮತ್ತು ವಿಪ್ರೋ ಇನ್‌ಫ್ರಾಸ್ಟ್ರಕ್ಚರ್ ಎಂಜಿನಿಯರಿಂಗ್‌ನ ಮುಖ್ಯ ಕಾರ್ಯಕಾರಿ ಅಧಿಕಾರಿ ಪ್ರತೀಕ್ ಕುಮಾರ್ ಮಾತನಾಡಿ, ಈ ಎಕ್ಸ್‌ಕಾನ್ ಸಮಾವೇಶವು ಸ್ಮಾರ್ಟ್ ಐ-ಟೆಕ್-ನೆಕ್ಸ್ಟ್ ಜನರೇಶನ್ ಇಂಡಿಯಾ-75 ಪರಿಕಲ್ಪನೆಯತ್ತ ಬೆಳಕು ಚೆಲ್ಲಿತು. ಇದರಲ್ಲಿ ತಂತ್ರಜ್ಞಾನವು ನಿರ್ಮಾಣ ಮತ್ತು ಯಂತ್ರೋಪಕರಣಗಳ ಉದ್ಯಮದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಯಾವ ರೀತಿ ಪಾತ್ರ ವಹಿಸುತ್ತದೆ ಎಂಬುದರ ಬಗ್ಗೆ ವಿಚಾರ ಮಂಥನ ನಡೆಸಲಾಯಿತು. ತಂತ್ರಜ್ಞಾನವು ನಮ್ಮ ಜೀವನದಲ್ಲಿ ಹಲವು ಬಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಉತ್ಪನ್ನಗಳು ಮತ್ತು ಸೇವೆಗಳು ನಮಗೆಲ್ಲರಿಗೂ ಹೊಸ ಅನುಭವಗಳನ್ನು ನೀಡುತ್ತಿವೆ ಎಂದರು.

ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ತಂತ್ರಜ್ಞಾನದಿಂದ ಬಹುತೇಕ ಉದ್ಯಮಗಳು ಕೆಲವು ಔದ್ಯಮಿಕ ಅಡೆತಡೆ ಎದುರಿಸುವಂತಾಯಿತು. ಕಂಪೆನಿಗಳು ಪ್ರಮುಖವಾದ ಯಶಸ್ವಿಯನ್ನು ಸಾಧಿಸಿ ತೋರಿಸಿದವು. ಹಾಗಾದರೆ ನಿರ್ಮಾಣ ಉದ್ಯಮದ ಕತೆ ಏನು ಎಂಬ ಪ್ರಶ್ನೆ ಕಾಡತೊಡಗಿತು. ಆದರೆ ಕಳೆದ 10 ವರ್ಷಗಳಲ್ಲಿ ಹಲವು ಬದಲಾವಣೆಗಳನ್ನು ಕಂಡಿದೆ. ಹೊಸ ಹೊಸ ವಿನ್ಯಾಸದ ಉತ್ಪನ್ನಗಳು ಬಂದಿವೆ. ವಿವಿಧ ಬಗೆಯ ಕಟ್ಟಡಗಳು ನಿರ್ಮಾಣ ಆಗಿವೆ. ಕಟ್ಟಡ ನಿರ್ಮಾಣದ ಹಲವು ವಿಧಗಳು ಬಂದಿವೆ. ಇದೆಲ್ಲಾ ಸಾಧ್ಯವಾದದ್ದು ಸುಧಾರಿತ ತಂತ್ರಜ್ಞಾನದಿಂದ. ಎಐ, ಐಒಟಿ, ಆಟೋಮೇಶನ್ ಸೇರಿದಂತೆ ಇನ್ನಿತರೆ ತಂತ್ರಜ್ಞಾನಗಳಿಂದ ಭವಿಷ್ಯದ ಸಾಧ್ಯತೆಗಳನ್ನು ಸಾಧ್ಯವಾಗಿಸುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News