ತುರ್ತು ವೈದ್ಯಕೀಯ ಸೇವೆಗಾಗಿ 500 ಮಂದಿಗೆ ಸಿಂಗಾಪುರ ಮಾದರಿ ತರಬೇತಿ: ಪಂಕಜ್‌ ಕುಮಾರ್ ಪಾಂಡೆ

Update: 2019-12-13 17:50 GMT

ಬೆಂಗಳೂರು, ಡಿ.13: ಅಪಘಾತ ಸೇರಿ ತುರ್ತು ಸೇವೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಿಂಗಾಪುರ ದೇಶದಲ್ಲಿ ನಾಡಿನ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಇದುವರೆಗೂ 500 ಮಂದಿ ತರಬೇತಿ ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಹೇಳಿದರು.

ಶುಕ್ರವಾರ ನಗರದ ಎಂಜಿ ರಸ್ತೆಯ ಖಾಸಗಿ ಹೊಟೇಲ್ನಲ್ಲಿ ಸಿಂಗಾಪುರದ ಹೆಲ್ತ್ ಸರ್ವಿಸಸ್ ಹಾಗೂ ಟೆಮಾಸೆಕ್ ಅಂತರ್‌ರಾಷ್ಟ್ರೀಯ ಪ್ರತಿಷ್ಠಾನ, ಆಸ್ಪತ್ರೆ ತುರ್ತು ಸೇವೆಯ ಪ್ರಥಮ ಪ್ರತಿಕ್ರಿಯೆ ತರಬೇತಿ ಪೂರ್ಣಗೊಂಡಿರುವವರ ಜೊತೆಗೆ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು, ಈ ಯೋಜನೆಯಿಂದ ಸರಿ ಸುಮಾರು 500 ಮಂದಿ ಕಿರಿಯ ಮತ್ತು ಹಿರಿಯ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಒಂದು ವಾರದ ಕಾಲ ಸಿಂಗಾಪುರದಲ್ಲಿಯೇ ಪ್ರಥಮ ಚಿಕಿತ್ಸೆ ತರಬೇತಿ ಪಡೆದಿದ್ದಾರೆ ಎಂದು ತಿಳಿಸಿದರು.

ಅಪಘಾತ, ಸುಟ್ಟಗಾಯ, ಉಸಿರಾಟ ತೊಂದರೆ, ಎದೆನೋವು, ಹೃದಯಾಘಾತ, ವಿಷ ಸೇವನೆಯಂತಹ ಪ್ರಕರಣಗಳಲ್ಲಿ ತುರ್ತು ಚಿಕಿತ್ಸೆ ನಿರ್ವಹಿಸುವ ಸಂಬಂಧ ರಾಜ್ಯದ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಿಂಗಾಪುರ ಪರಿಣಿತ ವೈದ್ಯರ ತಂಡ ಜ್ಞಾನಕೌಶಲ್ಯ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸಿಂಗಾಪುರದ ಹೆಲ್ತ್ ಸರ್ವಿಸಸ್ ನಿರ್ದೇಶಕ ಪ್ರೊ.ಚುವಾ ಯೆವ್ ಲೆಂಗ್ ಮಾತನಾಡಿ, ಬೇಜವಾಬ್ದಾರಿಯಿಂದ ಮನುಷ್ಯನ ಜೀವ ಹೋಗಬಾರದು. ವಿಶ್ವಾಸಾರ್ಹ ಹಾಗೂ ಸುಸ್ಥಿರ ಆರೋಗ್ಯ ಸೇವೆಯನ್ನು ನಾಗರಿಕರಿಗೆ ಕಲ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ನುಡಿದರು.

ಪ್ರಥಮ ಚಿಕಿತ್ಸೆ ಎಂದರೆ ಗಾಯ ಅಥವಾ ಅವಘಡಗಳಾದಾಗ ಒದಗಿಸುವ ಆರಂಭಿಕ ಆರೈಕೆ ಎಂಬುದಾಗಿ ವ್ಯಾಖ್ಯಾನಿಸಬಹುದು. ತರಬೇತಿ ಪಡೆದ ವೃತ್ತಿಪರ ವ್ಯಕ್ತಿಗಳು ರೋಗಿಗೆ ಅಥವಾ ಗಾಯಾಳುವಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯುವವರೆಗೆ ಒದಗಿಸುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಓಂ.ಪ್ರಕಾಶ್ ಪಾಟೀಲ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News