ಜ.8ರ ಅಖಿಲ ಭಾರತ ಮುಷ್ಕರಕ್ಕೆ ವಿವಿಧ ಸಂಘಟನೆಗಳ ಬೆಂಬಲ

Update: 2019-12-19 05:51 GMT

ಬೆಂಗಳೂರು, ಡಿ.13: ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಜ.8 ರಂದು ಕರೆ ನೀಡಿರುವ ಅಖಿಲ ಭಾರತ ಮುಷ್ಕರಕ್ಕೆ ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳು ಬೆಂಬಲ ಘೋಷಿಸಿವೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಸಂಘಟನೆಯ ಮುಖಂಡರಾದ ಎ.ಜ್ಯೋತಿ, ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಎನ್‌ಡಿಎ ಸರಕಾರ ತಮ್ಮ ಎರಡೂ ಅವಧಿಯ ಆಳ್ವಿಕೆಯಲ್ಲಿ ಜನ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿದೆ ಎಂದು ಆಪಾದಿಸಿದರು.

ಆರ್ಥಿಕ ಹಿಂಜರಿತ, ಉದ್ಯೋಗಾವಕಾಶ ಕುಸಿತ ಹಾಗೂ ನಿರುದ್ಯೋಗ ಸಮಸ್ಯೆ, ಶಿಕ್ಷಣ, ಸಾರ್ವಜನಿಕ ರಂಗದ ಖಾಸಗೀಕರಣ ಖಂಡಿಸಿ, ಮಹಿಳಾ ಸುರಕ್ಷತೆಗೆ ಕಠಿಣ ಕ್ರಮ ಕೈಗೊಳ್ಳಬೇಕು, ಉದ್ಯೋಗ ಸೃಷ್ಟಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎಸ್‌ಎಫ್‌ಐ, ಜೆಎಂಎಸ್, ಎನ್‌ಎಫ್‌ಐಡಬ್ಲ್ಯೂ, ಎಐಎಸ್‌ಎಫ್, ಎಐಡಿವೈಓ ಸೇರಿದಂತೆ ಹಲವು ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿವೆ ಎಂದು ಮಾಹಿತಿ ನೀಡಿದರು.

ದೇಶದಲ್ಲಿ ಶಿಕ್ಷಣ ಸ್ಥಿತಿ ಚಿಂತಾಜನಕವಾಗಿದೆ. ಆಳುವ ಸರಕಾರಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ. ಮನುವಾದಿ ಮತ್ತು ಬಂಡವಾಳಶಾಹಿ ಶಕ್ತಿಗಳ ಕೈಯಲ್ಲಿ ಬಂಧಿಯಾಗಿರುವ ಕೇಂದ್ರ ಸರಕಾರ ದೇಶದ ಬಹುಸಂಖ್ಯಾತ ಜನರಿಗೆ ಕಳಪೆ ಶಿಕ್ಷಣವನ್ನು ನೀಡಲು ಶಿಕ್ಷಣ ಖಾಸಗೀಕರಣಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆಸಿದೆ. ಅದರ ಭಾಗವಾಗಿಯೇ ಯುಜಿಸಿಯನ್ನು ನಿರ್ನಾಮ ಮಾಡಿ, ಎಚ್‌ಇಸಿಐ ಮಸೂದೆ ಜಾರಿಗೆ ಮುಂದಾಗಿದ್ದಾರೆ ಎಂದರು.

ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ವ್ಯಾಪಕವಾಗಿ ನಿರುದ್ಯೋಗ ಬೆಳೆದಿದೆ. ಕೋಟ್ಯಂತರ ಜನರು ಕೆಲಸಕ್ಕಾಗಿ ಅಲೆಯುವಂತಾಗಿದೆ. ಇಡೀ ದೇಶವೇ ನಿರುದ್ಯೋಗದ ಕರಾಳತೆಯಿಂದ ನರಳುತ್ತಿದೆ. ಉನ್ನತ ಶಿಕ್ಷಣ ಪಡೆದವರೇ ಸಿ ದರ್ಜೆಯ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ದುಸ್ಥಿತಿ ಎದುರಾಗಿದೆ ಎಂದು ದೂರಿದರು.

ನೋಟು ಅಮಾನ್ಯೀಕರಣ, ಜಿಎಸ್‌ಟಿಯಿಂದಾಗಿ ದೇಶದ ಜನರು ಇನ್ನೂ ಚೇತರಿಸಿಕೊಳ್ಳಲಾಗಲಿಲ್ಲ. ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ಪರಿಣಾಮದಿಂದ ದೇಶದ ಆರ್ಥಿಕ ಸ್ಥಿತಿ ಕುಸಿದಿದೆ. ಇದೀಗ ಎನ್‌ಆರ್‌ಸಿಯಂತಹ ಸಂವಿಧಾನ ವಿರೋಧಿ ಕಾನೂನು ಮಾಡುವ ಮೂಲಕ ದೇಶವನ್ನೇ ಛಿದ್ರ ಛಿದ್ರ ಮಾಡಲು ತಯಾರಿ ನಡೆಸಿದ್ದಾರೆ ಎಂದು ಆಪಾದಿಸಿದರು.

ಈ ವೇಳೆ ಸುದ್ದಿಗೋಷ್ಠಿಯಲ್ಲಿ ಎಸ್‌ಎಫ್‌ಐ ರಾಜ್ಯಾಧ್ಯಕ್ಷ ವಿ.ಅಂಬರೀಶ್, ಕಾರ್ಯದರ್ಶಿ ಗುರುರಾಜ್ ದೇಸಾಯಿ, ಎಐಡಿಎಸ್‌ಓನ ಸಿತಾರ, ಎಐಎಸ್‌ಎಫ್‌ನ ಕೆ.ಜ್ಯೋತಿ, ಜೆಎಂಎಸ್‌ನ ಗೌರಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News