ಪಾಕ್ ಸ್ಪಿನ್ ಬೌಲಿಂಗ್ ಸಲಹೆಗಾರರಾಗಿ ಮುಷ್ತಾಕ್ ಅಹ್ಮದ್ ನೇಮಕ

Update: 2019-12-13 18:37 GMT

ಕರಾಚಿ, ಡಿ.13: ಮಾಜಿ ಟೆಸ್ಟ್ ಲೆಗ್-ಸ್ಪಿನ್ನರ್ ಮುಷ್ತಾಕ್ ಅಹ್ಮದ್‌ರನ್ನು ಒಂದು ವರ್ಷದ ಅವಧಿಗೆ ತನ್ನ ಕ್ರಿಕೆಟ್ ತಂಡದ ಸ್ಪಿನ್ ಬೌಲಿಂಗ್ ಸಲಹೆಗಾರರನ್ನಾಗಿ ಪಾಕಿಸ್ತಾನ ನೇಮಕ ಮಾಡಿದೆ. ಮುಷ್ತಾಕ್ ಮೊದಲಿಗೆ ಲಾಹೋರ್‌ನಲ್ಲಿರುವ ಕ್ರಿಕೆಟ್ ಅಕಾಡಮಿಯಲ್ಲಿ ಲೆಗ್ ಸ್ಪಿನ್ನರ್ ಯಾಸಿರ್ ಶಾ ಅವರೊಂದಿಗೆ ಕೆಲಸ ಮಾಡಲಿದ್ದು, ಆ ಬಳಿಕ ಕರಾಚಿಯಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಲಿದ್ದಾರೆ.

ಇದೀಗ ಮೊದಲ ಪಂದ್ಯ ನಡೆಯುತ್ತಿರುವ ರಾವಲ್ಪಿಂಡಿಯಲ್ಲಿರುವ ಯಾಸಿರ್‌ರನ್ನು ಬಿಡುಗಡೆ ಮಾಡಲಾಗಿದ್ದು, ಅವರನ್ನು ಲಾಹೋರ್‌ಗೆ ತೆರಳಿ ಮುಷ್ತಾಕ್‌ರೊಂದಿಗೆ ಸಲಹೆ ಪಡೆಯುವಂತೆ ಸೂಚಿಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ. ಮುಷ್ತಾಕ್‌ರನ್ನು ಕಳೆದ ವಾರ ಸ್ಪಿನ್ ಬೌಲಿಂಗ್ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಅವರು ವರ್ಷಕ್ಕೆ 120 ದಿನಗಳ ಕಾಲ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ ಹಾಗೂ ಅಂಡರ್-16, ಅಂಡರ್-19 ಹಾಗೂ ಇತರ ದೇಶೀಯ ಬೌಲರ್‌ಗಳೊಂದಿಗೆ ಕೆಲಸ ಮಾಡಲಿದ್ದಾರೆ. ಅಗತ್ಯವಿದ್ದಾಗ ರಾಷ್ಟ್ರೀಯ ತಂಡದೊಂದಿಗೂ ಕಾರ್ಯನಿರ್ವಹಿಸಲಿದ್ದಾರೆ ಎಂದು ಪಿಸಿಬಿ ತಿಳಿಸಿದೆ.

ಮುಷ್ತಾಕ್ ವೆಸ್ಟ್‌ಇಂಡೀಸ್ ತಂಡದೊಂದಿಗೆ ಸ್ಪಿನ್ ಸಲಹೆಗಾರನಾಗಿ ಕೆಲಸ ಮಾಡಿದ್ದರು. ಇದೀಗ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಲಿದ್ದು, ಇತ್ತೀಚೆಗಿನ ಪಂದ್ಯಗಳಲ್ಲಿ ವಿಫಲವಾಗುತ್ತಿರುವ ಯಾಸಿರ್‌ಗೆ ನೆರವಾಗಲಿದ್ದಾರೆ.

200ಕ್ಕೂ ಅಧಿಕ ಟೆಸ್ಟ್ ವಿಕೆಟ್‌ಗಳನ್ನು ಉರುಳಿಸಿರುವ ಯಾಸಿರ್ ಇತ್ತೀಚೆಗೆ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಯಲ್ಲಿ ಬಹಳಷ್ಟು ರನ್ ನೀಡಿದ್ದರು. ರಾವಲ್ಪಿಂಡಿಯಲ್ಲಿ ಈಗ ನಡೆಯುತ್ತಿರುವ ಲಂಕಾ ವಿರುದ್ಧದ ಮೊದಲ ಪಂದ್ಯದ ಆಡುವ-11ರ ಬಳಗದಿಂದ ಯಾಸಿರ್‌ರನ್ನು ಕೈಬಿಡಲಾಗಿದೆ.

49ರ ಹರೆಯದ ಮುಷ್ತಾಕ್ ಪಾಕ್ ಪರವಾಗಿ 44 ಟೆಸ್ಟ್‌ಗಳು(185 ವಿಕೆಟ್‌ಗಳು)ಹಾಗೂ 144 ಏಕದಿನ(61 ವಿಕೆಟ್‌ಗಳು)ಪಂದ್ಯಗಳನ್ನು ಆಡಿದ್ದಾರೆ.ದೇಶದಲ್ಲಿ ಹೊಸ ಸ್ಪಿನ್ ಬೌಲರ್ ಗುರುತಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News