ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ: ಸಚಿವ ಸಿ.ಟಿ.ರವಿ

Update: 2019-12-14 15:38 GMT

ಬೆಂಗಳೂರು, ಡಿ. 14: ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮುಖ್ಯಮಂತ್ರಿ ಯಡಿಯೂರಪ್ಪನವರ ಪರಮಾಧಿಕಾರ. ಖಾತೆಯ ಬಗ್ಗೆ ಅಸಮಾಧಾನವಿಲ್ಲ. ತನಗೆ ಯಾವುದೇ ಜವಾಬ್ದಾರಿ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಶನಿವಾರ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ವರಿಷ್ಠರ ಜತೆ ಚರ್ಚಿಸಿ ಸಂಪುಟಕ್ಕೆ ಯಾರು ಸೂಕ್ತ, ಯಾರಿಗೆ ಯಾವ ಖಾತೆ ನೀಡಬೇಕೆಂದು ತೀರ್ಮಾನ ಮಾಡಿದ್ದಾರೆ ಎಂದರು.

ಕೆಲ ಶಾಸಕರು ಸಚಿವ ಸ್ಥಾನ, ಇಲ್ಲವೇ ಖಾತೆಗಳ ಬಗ್ಗೆ ಅಥವಾ ಕೆಲ ಸಚಿವರು ಮತ್ತೊಂದು ಉನ್ನತ ಹುದ್ದೆ ಬಗ್ಗೆ ಅಪೇಕ್ಷೆ ಹೊಂದುವುದು ತಪ್ಪಲ್ಲ. ಇದನ್ನೆ ಅಸಮಾಧಾನ ಎಂದು ಭಾವಿಸಬೇಕಿಲ್ಲ. ಖಾತೆಗಳ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ಅವರು ತಿಳಿಸಿದರು.

ನನಗೆ ನೀಡುವ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದು, ತನಗೆ ವಹಿಸಿರುವ ಇಲಾಖೆಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದೇನೆ ಎಂದ ಅವರು, ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದ ಸ್ಥಿರ ಮತ್ತು ಸದೃಢ ಸರಕಾರ ಅಸ್ತಿತ್ವಕ್ಕೆ ಬಂದಿದೆ ಎಂದರು. ಸುದ್ಧಿಗೋಷ್ಠಿಯಲ್ಲಿ ಮಾಧ್ಯಮ ಸಂಚಾಲಕ ಎ.ಎಚ್. ಆನಂದ್ ಹಾಜರಿದ್ದರು.

‘ಬಿ.ಶ್ರೀರಾಮುಲು ಜನನಾಯಕರು. ಆದರೆ, ರಮೇಶ್ ಜಾರಕಿಹೊಳಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ಪ್ರಮುಖ ಪಾತ್ರ ವಹಿಸಿರಬಹುದು. ಪಕ್ಷದ ವರಿಷ್ಠರ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು. ಯಾರನ್ನು ಮಂತ್ರಿ ಮಾಡಬೇಕು, ಒಳಗೆ ತೆಗೆದುಕೊಳ್ಳಬೇಕು. ಯಾರನ್ನು ಹೊರಗೆ ಕಳುಹಿಸಬೇಕೆಂಬ ಬಗ್ಗೆ ಸಿಎಂ ತೀರ್ಮಾನಿಸಲಿದ್ದಾರೆ’

-ಸಿ.ಟಿ.ರವಿ, ಪ್ರವಾಸೋದ್ಯಮ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News