ಬೆಂಗಳೂರು: ಕೇಂದ್ರ ಸರಕಾರದ ವಿರುದ್ಧ ಸಿಎಫ್ಐ ವತಿಯಿಂದ ‘ಸಂವಿಧಾನ ರಕ್ಷಿಸಿ’ ಪ್ರತಿಭಟನೆ

Update: 2019-12-19 06:34 GMT

ಬೆಂಗಳೂರು, ಡಿ.14: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಎನ್‌ಆರ್‌ಸಿ, ಸಿಎಬಿ ಹಾಗೂ ಬಾಬರಿ ಮಸೀದಿ ತೀರ್ಪು ಖಂಡಿಸಿ ದಸ್ತೂರ್ ಬಚಾವೋ(ಸಂವಿಧಾನ ರಕ್ಷಿಸಿ) ಬೃಹತ್ ಪ್ರತಿಭಟನಾ ಸಭೆಯನ್ನು ನಗರದ ಪುರಭವನದ ಎದುರು ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಎಂ.ಎಸ್.ಸಾಜಿದ್, ಕೇಂದ್ರ ಸರಕಾರವು ತಾರತಮ್ಯ ಒಳಗೊಂಡ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದ್ದು, ಈ ಮೂಲಕ ಮುಸಲ್ಮಾನರನ್ನು ದೇಶದಿಂದ ಹೊರದಬ್ಬುವ ಷಡ್ಯಂತ್ರವಾಗಿದೆ. ಮುಸಲ್ಮಾನರು ಈ ದೇಶದಲ್ಲಿ ಜನಿಸಿದ್ದು, ಇಲ್ಲೇ ಜೀವಿಸಲಿದ್ದೇವೆ ಹಾಗೂ ಈ ಮಣ್ಣಿನಲ್ಲಿಯೇ ಮರಣ ಹೊಂದಲಿದ್ದೇವೆ ಎಂದರು.

ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಹಲವು ಹೋರಾಟಗಳು ನಡೆಯುತ್ತಿದ್ದು ಸರಕಾರ ಈ ಕುರಿತು ಕಿಂಚಿತ್ತೂ ಪ್ರತಿಕ್ರಿಯೆ ನೀಡುತ್ತಿಲ್ಲ, ಬದಲಾಗಿ ಅಸ್ಸಾಮಿನಲ್ಲಿ ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ನಡೆಸಿ ಕೊಲ್ಲಲಾಗುತ್ತಿದೆ ಎಂದು ದೂರಿದರು. ಕ್ಯಾಂಪಸ್ ಫ್ರಂಟ್ ನಿಮ್ಮ ಗುಂಡುಗಳಿಗೆ ಹೆದರುವುದಿಲ್ಲ, ಇದನ್ನೆಲ್ಲ ಮೆಟ್ಟಿ ನಿಂತು ವಿದ್ಯಾರ್ಥಿಗಳನ್ನು ಸಂಘಟಿಸಿಕೊಂಡು ದೇಶದ ಸಂವಿಧಾನವನ್ನು ಕಾಪಾಡಲಿದ್ದೇವೆ ಎಂದು ಅವರು ಹೇಳಿದರು.

ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಸಮಿತಿ ಸದಸ್ಯ ತಫ್ಸಿರ್, ಎನ್.ಸಿ.ಎಚ್.ಆರ್.ಓ ರಾಜ್ಯಾಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಎಸ್.ಬಾಲನ್, ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷಾ, ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿಯ ಸದಸ್ಯರು, ಉಪಾಧ್ಯಕ್ಷರಾದ ಆರಿಫ್ ಶಿವಮೊಗ್ಗ, ರಾಜ್ಯ ಕಾರ್ಯದರ್ಶಿ ಅಥಾವುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News