ಅಕ್ರಮ ವಾಣಿಜ್ಯ ಉದ್ದಿಮೆ ಪತ್ತೆಗೆ ಮುಂದಾದ ಬಿಬಿಎಂಪಿ: 198 ವಾರ್ಡ್‌ಗಳಲ್ಲಿ ಸಮೀಕ್ಷೆ ಆರಂಭ

Update: 2019-12-14 16:40 GMT

ಬೆಂಗಳೂರು, ಡಿ.14: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅನಧಿಕೃತ ಕಟ್ಟಡಗಳು, ಪಬ್, ಬಾರ್, ರೆಸ್ಟೋರೆಂಟ್ ಸೇರಿದಂತೆ ವಸತಿ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಕ್ರಮ ವಾಣಿಜ್ಯ ಉದ್ದಿಮೆಗಳನ್ನು ಪತ್ತೆ ಹಚ್ಚಲು ಬಿಬಿಎಂಪಿ ಮುಂದಾಗಿದೆ.

ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಅನಧಿಕೃತ ಪಬ್, ಬಾರ್, ರೆಸ್ಟೋರೆಂಟ್ ಸೇರಿದಂತೆ ವಾಣಿಜ್ಯ ಉದ್ದಿಮೆಗಳ ಸಮೀಕ್ಷೆಗೆ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಆದೇಶಿಸಿದ್ದು, ಡಿ.20ರೊಳಗೆ ವರದಿ ನೀಡುವಂತೆ ಪಾಲಿಕೆ ಆರೋಗ್ಯ ವಿಭಾಗ ಹಿರಿಯ ಪರಿವೀಕ್ಷಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ, ಸಮೀಕ್ಷೆ ನಡೆಸಲು 15 ದಿನಗಳ ಕಾಲಾವಕಾಶ ನೀಡಿದ್ದಾರೆ.

ಪಾಲಿಕೆಯ 198 ವಾರ್ಡ್‌ಗಳಲ್ಲಿ ಅಧಿಕೃತ ಮತ್ತು ಅನಧಿಕೃತ ವಾಣಿಜ್ಯ ಉದ್ದಿಮೆಗಳ ಸಮೀಕ್ಷೆಯನ್ನು ಪಾಲಿಕೆಯ ಹಿರಿಯ ಆರೋಗ್ಯ ಪರಿವೀಕ್ಷಕರು ಆರಂಭಿಸಿದ್ದು, ಆಯಾ ವಾರ್ಡ್‌ಗಳ ಪ್ರತಿ ಬೀದಿಯಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ.

ಈ ಸಮೀಕ್ಷೆ ವೇಳೆ ಯಾವ ಉದ್ದಿಮೆ ನಡೆಸಲಾಗುತ್ತಿದೆ. ವಿಳಾಸ, ಉದ್ದಿಮೆದಾರರ ಹೆಸರು, ಬಿಬಿಎಂಪಿಯಿಂದ ಪರವಾನಗಿ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಪರಿಶೀಲನೆ ಜತೆಗೆ ಪರವಾನಗಿ ಪಡೆದಿರುವ ಉದ್ದೇಶ, ಪರವಾನಗಿ ನವೀಕರಿಸಲಾಗಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಅದರೊಂದಿಗೆ ಯಾವ ರಸ್ತೆಯಲ್ಲಿ ಎಷ್ಟು ವಾಣಿಜ್ಯ ಮಳಿಗೆಗಳಿವೆ. ಅದರಲ್ಲಿ ಎಷ್ಟು ಅಧಿಕೃತ, ಎಷ್ಟು ಅನಧಿಕೃತ ಎಂಬ ಮಾಹಿತಿಯನ್ನು ಪರಾಮರ್ಶಿಸಿ ಪಾಲಿಕೆಯ ಹಿರಿಯ ಆರೋಗ್ಯ ಪರಿವೀಕ್ಷಕರು ಬಿಬಿಎಂಪಿ ಆಯುಕ್ತರಿಗೆ ವರದಿ ನೀಡಲಿದ್ದಾರೆ.

ಬಿಬಿಎಂಪಿಯಿಂದ ಅಧಿಕೃತವಾಗಿ ಉದ್ದಿಮೆ ಪರವಾನಗಿ ಪಡೆದು ಉದ್ದಿಮೆ ನಡೆಸುತ್ತಿರುವವರ ಸಂಖ್ಯೆ ಕೇವಲ 47 ಸಾವಿರ ಮಾತ್ರ. ಆದರೆ ಬೆಸ್ಕಾಂನಲ್ಲಿ ಸುಮಾರು ಐದು ಲಕ್ಷಕ್ಕೂ ಅಧಿಕ ಗ್ರಾಹಕರು ವಾಣಿಜ್ಯ ಬಳಕೆಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ಎರಡೂ ಅಂಕಿ ಅಂಶಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಬಿಬಿಎಂಪಿಗೆ ವಂಚಿಸಿ ಉದ್ದಿಮೆ ನಡೆಸುವವರ ವಿರುದ್ಧ ಸಮೀಕ್ಷೆ ನಂತರ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

48,440 ಉದ್ದಿಮೆಗಳು ಅಧಿಕೃತ: ಬಿಬಿಎಂಪಿ ವ್ಯಾಪ್ತಿಯ ದಕ್ಷಿಣ ವಲಯದಲ್ಲಿ 11,044, ಪೂರ್ವ ವಲಯದಲ್ಲಿ 8,293, ಪಶ್ಚಿಮ ವಲಯದಲ್ಲಿ 13,487, ಯಲಹಂಕ ವಲಯದಲ್ಲಿ 4,770, ಮಹದೇವಪುರ ವಲಯದಲ್ಲಿ 5,046, ಬೊಮ್ಮನಹಳ್ಳಿ ವಲಯದಲ್ಲಿ 3,047, ದಾಸರಹಳ್ಳಿ ವಲಯದಲ್ಲಿ 2,434, ಆರ್‌ಆರ್‌ನಗರ ವಲಯದಲ್ಲಿ 319 ಸೇರಿದಂತೆ ಒಟ್ಟು 48,440 ಉದ್ದಿಮೆಗಳಿಗೆ ಬಿಬಿಎಂಪಿಯಿಂದ ಅಧಿಕೃತವಾಗಿ ಪರವಾನಿಗೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News