ಸಮಾಜವಾದ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ: ರೈತ ನಾಯಕ ಕೆ.ಟಿ.ಗಂಗಾಧರ್

Update: 2019-12-14 17:34 GMT

ಬೆಂಗಳೂರು, ಡಿ.14: ಇಂದಿನ ಸಮಾಜದಲ್ಲಿ ಸಮಾಜವಾದವು ನಂಬಿಕೆಯನ್ನೇ ಕಳೆದುಕೊಳ್ಳುತ್ತಿದೆ. ಅದನ್ನು ಮರು ಸೃಷ್ಟಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ರೈತ ನಾಯಕ ಕೆ.ಟಿ.ಗಂಗಾಧರ್ ಅಭಿಪ್ರಾಯಪಟ್ಟಿದ್ದಾರೆ. 

ಶನಿವಾರ ನಗರದ ಗಾಂಧಿ ಭವನದಲ್ಲಿ ಸಮಾಜವಾದಿ ಅಧ್ಯಯನ ಕೇಂದ್ರ, ರಾಷ್ಟ್ರ ಸೇವಾ ದಳ, ಹಿಂದ್ ಮಜ್ದೂರ್ ಸಭಾ, ಕರ್ನಾಟಕ ರಾಜ್ಯ ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಜಂಟಿಯಾಗಿ ಮಹಾತ್ಮ ಗಾಂಧಿ-ಕಸ್ತೂರ ಬಾ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ‘ಪರ್ಯಾಯ ವ್ಯವಸ್ಥೆಗಾಗಿ ರಾಷ್ಟ್ರಮಟ್ಟದ ಸಮಾಜವಾದಿ ಸಮಾಗಮ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶೋಷಿತ ವರ್ಗಗಳ ಪರವಾಗಿ, ದುಡಿಯುವವರ ಧ್ವನಿಯಾಗಿ ನಿಂತಿದ್ದ ಸಮಾಜವಾದಿಗಳು ಎಲ್ಲರೂ ಬದಲಾಗುತ್ತಿದ್ದಾರೆ. ಸಮಾಜವಾದಿ ನಾಯಕರ ಮೇಲೆ ಇಂದಿನ ಯುವ ಸಮೂಹ ಸಂಪೂರ್ಣ ಅಪನಂಬಿಕೆಯನ್ನು ಬೆಳೆಸಿಕೊಂಡಿದೆ. ಇದನ್ನು ತೊಲಗಿಸಲು ಮತ್ತೊಮ್ಮೆ ಎಲ್ಲರೂ ಒಂದಾಗಬೇಕಿದೆ. ಪರ್ಯಾಯ ವ್ಯವಸ್ಥೆ ಕಟ್ಟಬೇಕಾಗಿದೆ ಎಂದು ನುಡಿದರು.

ಸ್ವಾತಂತ್ರ ಪೂರ್ವದಲ್ಲಿ, ಸ್ವಾತಂತ್ರ ನಂತರ ಹಾಗೂ ಇಂದಿಗೂ ಸಮಾಜವಾದಿಗಳ ಪಾತ್ರ ಅಪಾರವಾಗಿದೆ. ಅಂದಿನಿಂದ ಇಂದಿನವರೆಗೂ ನಿರಂತರವಾದ ಹೋರಾಟ ನಡೆಸಿಕೊಂಡು ಬಂದಿದ್ದೇವೆ. 200 ವರ್ಷಗಳು ಭಾರತವನ್ನಾಳಿದ ಬ್ರಿಟಿಷರು ಹಾಗೂ ಪರಕೀಯರು ಸೃಷ್ಟಿಸಿದ ಸಮಸ್ಯೆಗಳು ಇಂದಿಗೂ ಮುಂದುವರಿದಿದೆ ಎಂದು ಅವರು ಹೇಳಿದರು.

ದೇಶಕ್ಕೆ ಸ್ವತಂತ್ರ ಬಂದು 70 ವರ್ಷಗಳು ಕಳೆಯುತ್ತಿದ್ದರೂ, ಇನ್ನೂ ಯಾವುದೇ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. 70 ವರ್ಷಗಳಲ್ಲಿ ಅಧಿಕಾರ ನಡೆಸಿದ ಎಲ್ಲ ರಾಜಕೀಯ ಪಕ್ಷಗಳೂ ಇದಕ್ಕೆ ಹೊಣೆಗಾರರಾಗಿದ್ದಾರೆ. ನಮ್ಮನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳ ವಿರುದ್ಧ ಸಮಾಜವಾದಿಗಳು ಚಿಂತನೆ ಮಾಡಬೇಕು ಹಾಗೂ ಹೋರಾಟ, ಚಳವಳಿ ರೂಪಿಸಬೇಕಿದೆ ಎಂದರು.

ಸಮಾಜವಾದಿಗಳ ಹೋರಾಟದ ಬಗ್ಗೆ ವಿದ್ಯಾರ್ಥಿ, ಯುವಜನರು, ಕೃಷಿ ಕೂಲಿ ಕಾರ್ಮಿಕರು, ರೈತರು ಸೇರಿದಂತೆ ಎಲ್ಲರಿಗೂ ಅರಿವು ಮೂಡಿಸಬೇಕಿದೆ. ವಿದ್ಯಾವಂತರು, ಉದ್ಯೋಗಸ್ಥ ಯುವಜನರು, ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಿದೆ ಎಂದು ಅವರು ಸಲಹೆ ನೀಡಿದರು.

ಕೇಂದ್ರ ಸರಕಾರ ಜಿಡಿಪಿಯಲ್ಲಿ ರೈತರ ಪಾಲು ಅತ್ಯಂತ ಕಡಿಮೆಯಿದೆ ಎನ್ನುತ್ತಿದೆ. ಆದರೆ, ಅಧಿಕ ಪ್ರಮಾಣದಲ್ಲಿ ಕೃಷಿ ಕ್ಷೇತ್ರದಿಂದಲೇ ಜಿಡಿಪಿಗೆ ಪಾಲು ಹೋಗುತ್ತಿದೆ ಎಂದ ಅವರು, ಬೀದಿಯಲ್ಲಿ ತರಕಾರಿ ಮಾರಾಟ ಮಾಡವವರಿಗೆ ಅರ್ಥವಾದಷ್ಟು ಪ್ರಧಾನಿಗೆ ನಮ್ಮ ದೇಶದ ಅರ್ಥ ವ್ಯವಸ್ಥೆ ಅರ್ಥವಾಗಿಲ್ಲ ಎಂದರು.

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಸಮಾಜವಾದಿ ಚಿಂತನೆಗಳು ಕಮ್ಯುನಿಸ್ಟ್ ಚಿಂತನೆಗಳ ಮತ್ತೊಂದು ಸ್ವರೂಪವಾಗಿದೆ. ಪಂಚಾಯತ್ ಮಟ್ಟದಿಂದ ಹಿಡಿದು ರಾಜ್ಯ, ದೇಶದಲ್ಲಿ ಎಲ್ಲರಿಗೂ ಅಧಿಕಾರ ಹಂಚಿಕೆಯಾಗಬೇಕು ಎಂಬುದೇ ಸಮಾಜವಾದದ ಆಶಯ. ಆದರೆ, ಇದು ಎಲ್ಲಿಯೂ ಚಾಲನೆಗೆ ಬಂದಿಲ್ಲ ಎಂದರು.

ಇಂದಿನ ನಮ್ಮ ಸಮಾಜವಾದ ಚಿಂತನೆಗಳು ನೆಲಕಚ್ಚುವ ಹಂತಕ್ಕೆ ತಲುಪಿದೆ. ಆದರೆ, ಸಮಾಜವಾದಿ ಚಿಂತನೆಗಳು ಎಂದಿಗೂ ಸಾಯುವುದಿಲ್ಲ ಎಂದ ಅವರು, ಮೋದಿ ಹಾಗೂ ಅಮಿತ್ ಶಾ ಸಮಾಜವಾದಿ ನಾಯಕರನ್ನೇ ಗುರಿಯಾಗಿಸಿದ್ದು, ಅವರನ್ನು ಅವರೆಡೆಗೆ ಸೆಳೆಯುತ್ತಿದ್ದಾರೆ. ಆದರೆ, ಅದು ಸಾಕಾರಗೊಳ್ಳುವುದಿಲ್ಲ ಎಂದರು.

ಕೇಂದ್ರ ಸರಕಾರ ಜಾರಿಗೆ ಮುಂದಾಗಿರುವ ಪೌರತ್ವ ತಿದ್ಧುಪಡಿ ಕಾಯ್ದೆ ಸಂವಿಧಾನ ವಿರೋಧಿಯಾಗಿದೆ. ಅಪಾಯಕಾರಿ ಕಾಯ್ದೆಯ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕಿದೆ. ಅಲ್ಲದೆ, ಮಹಿಳೆಯರ ಮೇಲಿನ ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆಗಳ ವಿರುದ್ಧ, ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಬಿ.ಆರ್.ಪಾಟೀಲ್, ಮೈಕಲ್ ಬಿ. ಫನಾಂಡೀಸ್, ಪ್ರಾಧ್ಯಾಪಕ ಅಶೀಮ್ ರಾಯ್, ಪ್ರೊ.ವರ್ಗೀಸ್ ಜಾರ್ಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News