ಡಿ.16ರಿಂದ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿ: ​ಪ್ರಾಯೋಗಿಕವಾಗಿ ಕಸ್ತೂರ ಬಾ ರಸ್ತೆಯಲ್ಲಿ ಅನುಷ್ಠಾನ

Update: 2019-12-14 17:46 GMT

ಬೆಂಗಳೂರು, ಡಿ.14: ನಗರದ ಕೇಂದ್ರ ವಾಣಿಜ್ಯ ಪ್ರದೇಶಗಳಲ್ಲಿ(ಸಿಬಿಡಿ) ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಉಂಟಾಗುತ್ತಿರುವ ವಾಹನ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಬಿಬಿಎಂಪಿಯು ಸ್ಮಾರ್ಟ್ ಪಾರ್ಕಿಂಗ್ ಹೆಸರಿನಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹಕ್ಕೆ ಚಾಲನೆ ನೀಡಲು ಮುಂದಾಗಿದೆ. ಈ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕೆ ಕಸ್ತೂರ್ ಬಾ ರಸ್ತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಡಿ.16ರ ಸೋಮವಾರದಿಂದ ಈ ರಸ್ತೆಯಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ.

ಡಿ.16ರ ಸೋಮವಾರದಿಂದ ಕಸ್ತೂರ ಬಾ ರಸ್ತೆಯಲ್ಲಿ ಡಿಜಿಟಲ್ ಆಧರಿತ ಶುಲ್ಕ ಪಾವತಿಸುವ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಸುಮಾರು 700 ಮೀಟರ್ ಉದ್ದದ ಕಸ್ತೂರ ಬಾ ರಸ್ತೆಯ ಒಂದು ಭಾಗದಲ್ಲಿ ಬೈಕ್ ಹಾಗೂ ಕಾರು ಸೇರಿದಂತೆ ಒಟ್ಟು 200 ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ಸುರಕ್ಷತೆಗಾಗಿ ನಿಲುಗಡೆ ಸ್ಥಳದಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಲಾಗಿದೆ.

ಈ ಸ್ಮಾರ್ಟ್ ಪಾರ್ಕಿಂಗ್‌ನಲ್ಲಿ ಸಂಪೂರ್ಣ ತಂತ್ರಜ್ಞಾನ ಆಧರಿತ ನಿರ್ವಹಣೆ, ಸೆನ್ಸಾರ್ ಆಧರಿತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿಶೇಷವಾಗಿ ವಿಕಲ ಚೇತನರಿಗಾಗಿ ಕೆಲವು ಅಂಕಣಗಳನ್ನು ಮೀಸಲಿಡಲಾಗಿದೆ. ಅಲ್ಲದೇ, ಈ ಸೌಲಭ್ಯದ ಮೇಲ್ವಿಚಾರಣೆ ಮಾಡಲು ಗಸ್ತು ವಾಹನವನ್ನು ನಿಯೋಜಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.

ಆ್ಯಪ್ ಮಾಹಿತಿ: ಪಾರ್ಕಿಂಗ್ ಶುಲ್ಕ ವಸೂಲಿ ಮತ್ತು ಟಿಕೆಟ್ ನೀಡುವುದಕ್ಕೆ ಪಾರ್ಕಿಂಗ್ ಮೀಟರ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಸವಾರರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಪ್ರತಿದಿನ ವಾಹನ ನಿಲ್ಲಿಸುವುರಾದರೆ ಸ್ಮಾರ್ಟ್ ಕಾರ್ಡ್ ಪಡೆದುಕೊಂಡು ಶುಲ್ಕ ಪಾವತಿಸಲು ಅವಕಾಶವಿರುತ್ತದೆ. ಇನ್ನು ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಿದ್ದು, ಇದನ್ನು ಡೌನ್‌ಲೋಡ್ ಮಾಡಿಕೊಂಡರೆ ವಾಹನ ಸವಾರರು ಯಾವ ರಸ್ತೆಯಲ್ಲಿ ಪಾರ್ಕಿಂಗ್ ಜಾಗ ಖಾಲಿಯಿದೆ ಎಂಬುದನ್ನು ತಿಳಿಯಬಹುದಾಗಿದೆ. ಅಷ್ಟೇ ಅಲ್ಲ ಮುಂಗಡವಾಗಿಯೂ ತಮ್ಮ ವಾಹನಗಳ ನಿಲುಗಡೆಗೆ ಸ್ಥಳವನ್ನು ಕಾಯ್ದಿರಿಸಬಹುದಾಗಿದೆ.

ವರ್ಷಕ್ಕೆ 397.46 ಕೋಟಿ ಆದಾಯ: ಬಿಲ್ಡಿಂಗ್ ಕಂಟ್ರೋಲ್ ಸಲ್ಯೂಷನ್ಸ್ ಇಂಡಿಯಾ ಕಂಪೆನಿ ಗುತ್ತಿಗೆ ಪಡೆದಿದ್ದು, ಈ ಕಂಪನಿ ಪ್ರತಿವರ್ಷ 31.60 ಕೋಟಿ ಪಾಲಿಕೆಗೆ ನೀಡಬೇಕು. ಇದರಿಂದ ಮುಂದಿನ 10 ವರ್ಷಗಳಲ್ಲಿ ಬಿಬಿಎಂಪಿಗೆ 397.46 ಕೋಟಿ ಆದಾಯ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News