ಪ್ರಗತಿಪರರ ಧ್ರುವೀಕರಣ ಅನಿವಾರ್ಯ: ಬರಗೂರು ರಾಮಚಂದ್ರಪ್ಪ

Update: 2019-12-14 17:50 GMT

ಬೆಂಗಳೂರು, ಡಿ.14: ಪ್ರಗತಿಪರರು ಮೂಲ ಅಸ್ತಿತ್ವವನ್ನು ಬಿಟ್ಟು ಕೊಡದೆಯೂ ಸಹ ಈ ದೇಶದಲ್ಲಿ ಒಂದು ಧ್ರುವೀಕರಣದ ಅನಿವಾರ್ಯತೆ ಇದೆ. ಪ್ರಗತಿಪರರು ಧ್ರುವೀಕರಣದ ಅರ್ಥವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಹೋದರೆ ಇವತ್ತು ಎದುರಾಗುತ್ತಿರುವ ಸಮಸ್ಯೆಗಳಿಗೆ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ. 

ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಚಿಂತನ ಚಿಲುಮೆ ಸಂಘಟನೆ, ಸಮಕಾಲೀನ ವೇದಿಕೆ, ಮಾಲೆ ಪ್ರಕಾಶನ, ಜನಚಿಂತನ ಕೇಂದ್ರ, ದಲಿತ ಹಕ್ಕುಗಳ ಸಮಿತಿ ಹಾಗೂ ಅಖಿಲ ಕರ್ನಾಟಕ ವಿಚಾರವಾದಿಗಳ ಸಂಘಟನೆ ಸಹಯೋಗದೊಂದಿಗೆ ನಡೆದ 1962ರ ಭಾರತ-ಚೈನಾ ಯುದ್ಧಕ್ಕೆ ಸಂಬಂಧಿಸಿದ ಯಡೂರ ಮಹಾಬಲ ಬರೆದ ಪುಸ್ತಕಗಳ ಬಿಡುಗಡೆ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಬೃಹತ್ ರಾಷ್ಟ್ರಗಳಿಗೆ ಯುದ್ಧವೆಂಬುದು ಒಂದು ಉದ್ಯಮ. ಇತರ ದೇಶಗಳ ನಡುವೆ ಕಿಚ್ಚು ಹಚ್ಚಿ ತಮ್ಮ ವ್ಯಾಪಾರ ವೃದ್ಧಿಸಿಕೊಳ್ಳುವ ಕೆಲಸವನ್ನು ಬೃಹತ್ ರಾಷ್ಟ್ರಗಳು ಮಾಡುತ್ತಿವೆ. ಶಾಂತಿಯ ಮಾತುಗಳನ್ನು ಹೇಳುತ್ತಾ ಯುದ್ಧವನ್ನು ಬೆಂಬಲಿಸುತ್ತವೆ. ಮೊದಲೆಲ್ಲ ರಾಜಪ್ರಭುತ್ವದಲ್ಲಿ ಮತ್ತು ಪ್ರಜಾಪ್ರಭುತ್ವದಲ್ಲಿ ಯುದ್ಧಗಳು ಗಡಿ ಭಾಗಕ್ಕಾಗಿ ನಡೆಯುತ್ತಿದ್ದವು. ಆದರೆ, ಈಗ ಮತದಾನಕ್ಕಾಗಿ ಹಾಗೂ ಪಕ್ಷದ ಅಸ್ತಿತ್ವಕ್ಕಾಗಿ ಯುದ್ಧದ ಮಾತುಗಳು ಕೇಳಿ ಬರುತ್ತಿವೆ. ಯುದ್ಧ ಭೂಮಿಯಲ್ಲಿ ಹೋರಾಡುವ ಸೈನಿಕನ ಬಲಿದಾನಕ್ಕೆ ಬೆಲೆಯೆ ಇಲ್ಲದಂತಾಗಿದೆ ಎಂದು ವಿಷಾದಿಸಿದರು.

ಕನ್ನಡಕ್ಕೆ ಯುದ್ಧಗಳ ಕುರಿತಾದ ಕೃತಿಗಳ ಅಗತ್ಯತೆ ಇದೆ. ಯುದ್ಧದ ಬಗ್ಗೆ ಬರೆಯುವ ಕೃತಿಕಾರ ಘಟನೆಯ ಭೂತ ಕಾಲವನ್ನು ಪ್ರಧಾನವಾಗಿಟ್ಟುಕೊಂಡು ವರ್ತಮಾನಕ್ಕೆ ಅನುಗುಣವಾಗುವಂತೆ ಕೃತಿಯನ್ನು ರಚಿಸಬೇಕು. ಯುದ್ಧದ ಘಟನಾವಳಿಗಳನ್ನು, ಅಲ್ಲಿನ ನಿಜವಾದ ವಿದ್ಯಾಮಾನಗಳನ್ನು (ಯುದ್ಧ ಸಂದರ್ಭದ ಸತ್ಯಗಳು) ಯುದ್ಧದ ಬಗ್ಗೆ ಆಧಾರಗಳ ಸಂಗ್ರಹವನ್ನು ಬದ್ಧತೆಯಿಂದ ಮಾಡಿ, ಆ ಸಂದರ್ಭದ ಆಂತರಿಕ ವಿಷಯಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಾಗ ಇತಿಹಾಸ ರಚಿಸಲು ಸಾಧ್ಯ ಎಂದರು.

ರೈತ ಮುಖಂಡ ಜೆ.ಎಂ. ವೀರಸಂಗಯ್ಯ ಮಾತನಾಡಿ, ಯುದ್ಧದ ಉನ್ಮಾದ ಬೇಡ. ಭಾರತದಂತಹ ಶಾಂತಿಯುತ ರಾಷ್ಟ್ರಕ್ಕೆ ಯುದ್ಧದ ಅಗತ್ಯ ಇಲ್ಲ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಯುದ್ಧದ ಮಾತುಗಳನ್ನು ಆಡುವುದು ತಪ್ಪು ಎಂದು ಹೇಳಿದ ಅವರು, ಯುದ್ಧ ಬೇಡ ಎಂಬುವವರನ್ನು ದೇಶದ್ರೋಹಿಗಳು ಎಂಬ ಪಟ್ಟಿಗೆ ಸೇರಿಸುವ ಕಾಲ ಇದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯಡೂರು ಮಹಾಬಲ ಬರೆದಿರುವ ಯುದ್ಧ ಪೂರ್ವ ಕಾಂಡ(1962ರ ಭಾರತ- ಚೀನಾ ಯುದ್ಧದ ಹಿಂದಿನ ಬೆಳವಣಿಗೆಗಳು), ಯುದ್ಧ ಕಾಂಡ (1962ರ ಭಾರತ-ಚೀನಾ ಯುದ್ಧದ ವಿವರಗಳು) ಪುಸ್ತಕ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ವಿಮರ್ಶಕ ರಾಜೇಂದ್ರ ಚೆನ್ನಿ, ಕೆ.ಎನ್ ಉಮೇಶ್, ಡಾ. ಪ್ರಕಾಶ್ ಕೃಷ್ಣಪ್ಪ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮಾವಳ್ಳಿ ಶಂಕರ್, ಪತ್ರಕರ್ತ ಸಿದ್ಧನಗೌಡ ಪಾಟೀಲ್, ಚಿಂತನ ಚಿಲುಮೆಯ ಸಂಚಾಲಕ ಟಿ.ಎಸ್ ಅನಂತರಾಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News