ಬಿಎಂಟಿಸಿ: ಹೆಚ್ಚುವರಿ ಬಸ್‌ಗಳ ಖರೀದಿಗೆ ಸರಕಾರಕ್ಕೆ ಪ್ರಸ್ತಾವನೆ

Update: 2019-12-14 18:18 GMT

ಬೆಂಗಳೂರು, ಡಿ.14: ಬಿಎಂಟಿಸಿಯಿಂದ ಪ್ರಸ್ತುತ ಖರೀದಿ ಮಾಡುತ್ತಿರುವ ಎಲೆಕ್ಟ್ರಿಕಲ್ ಬಸ್‌ಗಳ ಜತೆಗೆ ಹೆಚ್ಚುವರಿಯಾಗಿ 1,500 ಬಸ್‌ಗಳ ಖರೀದಿಗೆ ಅನುಮತಿ ಹಾಗೂ ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಡಿಸೇಲ್ ಚಾಲಿತ ಬಸ್‌ಗಳನ್ನು ಹಂತ ಹಂತವಾಗಿ ಸ್ಥಗಿತಗೊಳಿಸಲು ನಿರ್ಧಾರ ಮಾಡಿರುವ ಬಿಎಂಟಿಸಿ ನಗರದಲ್ಲಿ ಸಂಪೂರ್ಣ ಎಲೆಕ್ಟ್ರಿಕಲ್ ಬಸ್‌ಗಳನ್ನು ರಸ್ತೆಗಿಳಿಸಲು ಚಿಂತನೆ ನಡೆಸಿದೆ.

ಪರಿಸರ ಮಾಲಿನ್ಯ ತಡೆಗೆ ಕೇಂದ್ರ ಸರಕಾದ ಫೇಮ್ ಇಂಡಿಯಾ 2ರ ಅಡಿಯಲ್ಲಿ ಬಿಎಂಟಿಸಿ ಗುತ್ತಿಗೆ ಆಧಾರದಲ್ಲಿ 350 ಬಸ್‌ಗಳನ್ನು ಪಡೆಯುತ್ತಿದೆ. ಅದಕ್ಕಾಗಿ ಕೆಎಸ್ಸಾರ್ಟಿಸಿಯಿಂದ ಟೆಂಡರ್ ಪ್ರಕ್ರಿಯೆ ನಡೆಸಲಾಗಿದ್ದು, ಅಂತಿಮ ಹಂತದಲ್ಲಿದೆ. ಅದರ ಜತೆಗೆ ಹೆಚ್ಚುವರಿಯಾಗಿ 1,500 ಬಸ್‌ಗಳನ್ನು ಖರೀದಿ ಮಾಡಲು ಅಥವಾ ಗುತ್ತಿಗೆ ಆಧಾರದಲ್ಲಿ ಪಡೆಯಲು ಅನುಮತಿ ನೀಡುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ.

ಮುಂದಿನ ಐದು ವರ್ಷಗಳಲ್ಲಿ ನಿಗಮಕ್ಕೆ ಏಳು ಸಾವಿರ ಎಲೆಕ್ಟ್ರಿಕಲ್ ಬಸ್‌ಗಳನ್ನು ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಅದು ಇನ್ನೂ ಚರ್ಚಾ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಅಂತಿಮ ರೂಪ ನೀಡಲಾಗುತ್ತದೆ.

ನಾಲ್ಕು ಕಡೆ ಚಾರ್ಜಿಂಗ್ ಘಟಕ: ಹೊಸದಾಗಿ ಖರೀದಿ ಮಾಡುತ್ತಿರುವ ಎಲೆಕ್ಟ್ರಿಕಲ್ ಬಸ್‌ಗಳ ಚಾರ್ಜಿಂಗ್‌ಗಾಗಿ ನಗರದ ನಾಲ್ಕು ಡಿಪೋಗಳಲ್ಲಿ ಚಾರ್ಜಿಂಗ್ ಘಟಕಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಹೆಬ್ಬಾಳ, ಎಚ್‌ಎಸ್‌ಆರ್ ಲೇಔಟ್, ವೈಟ್‌ಫೀಲ್ಡ್, ಕೆ.ಆರ್.ಪುರಂನಲ್ಲಿನ ಬಿಎಂಟಿಸಿ ಡಿಪೋಗಳಲ್ಲಿ ತಲಾ 15 ಚಾರ್ಜಿಂಗ್ ಘಟಕಗಳು ನಿರ್ಮಿಸಲು ಸ್ಥಳ ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News