ಸಮುದ್ರದ ನೀರಿನಿಂದ ಉಪ್ಪನ್ನು ತೆಗೆದರೆ ಏನಾಗುತ್ತೆ?

Update: 2019-12-15 10:47 GMT

ನಿಮ್ಮ ದಾಹವನ್ನು ತಣಿಸಿಕೊಳ್ಳಲು ನೀವು ಎಲ್ಲಿಗೆ ಹೋಗುತ್ತೀರಿ? ಅಡುಗೆ ಮನೆ, ಸ್ಥಳೀಯ ವಾಟರ್ ಟ್ಯಾಂಕ್, ಕೊಳಾಯಿ, ಕೆರೆ, ನದಿ, ಬಾವಿ ಇನ್ನಿತರ ಕುಡಿಯುವ ನೀರಿನ ಮೂಲಗಳ ಬಳಿ ಹೋಗುತ್ತೆವೆ ಅಲ್ಲವೇ?. 21ನೇ ಶತಮಾನದಲ್ಲಿ ಕುಡಿಯುವ ನೀರಿಗೆ ದೂರ ಹೋಗಬೇಕಾದ ಅಗತ್ಯ ಇಲ್ಲ. ಏಕೆಂದರೆ ಬಹುತೇಕವಾಗಿ ನೀರು ಇನ್ನೂ ಮನೆ ಬಾಗಿಲಿಗೆ ಪೂರೈಕೆಯಾಗುತ್ತಿದೆ. ಆದರೆ ಬಹುತೇಕ ಹಳ್ಳಿಗಳು ಮಳೆಗಾಲ ಮುಕ್ತಾಯವಾಗುತ್ತಿದ್ದಂತೆಯೇ ನೀರಿನ ಬವಣೆ ಅನುಭವಿಸುತ್ತಿವೆ. ಮುಂದೊಂದು ದಿನ ಆ ಸಮಸ್ಯೆ ನಮಗೂ ಬರುತ್ತದೆ ಎಂಬ ಆತಂಕ ನಮಗಿದ್ದರೂ ನಾವಿನ್ನೂ ನೀರನ್ನು ಸಂರಕ್ಷಿಸಲು ಸಾಧ್ಯವಾಗುತ್ತಿಲ್ಲ.

ಬಹುತೇಕವಾಗಿ ನೀರು ಮನೆಬಾಗಿಲಿಗೆ ಪೂರೈಕೆ ಆಗುತ್ತಿರುವುದರಿಂದ ನಾವಿನ್ನೂ ಆ ಬಗ್ಗೆ ಚಿಂತಿಸುತ್ತಿಲ್ಲ. ಕುಡಿಯಲು ಸಾಕಾಗುವಷ್ಟು, ಸ್ನಾನಕ್ಕೆ ಬೇಕಾದಷ್ಟು, ಶೌಚ ಮತ್ತು ಇನ್ನಿತರ ಕೆಲಸಗಳಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಸರಬರಾಜು ಆಗುತ್ತಲೇ ಇದೆಯಲ್ಲ. ಚಿಂತೆ ಯಾಕೆ? ಎನ್ನುವವರು ನಾವು. ಒಂದು ವೇಳೆ ಮನೆಬಾಗಿಲಿಗೆ ನೀರು ಸರಬರಾಜಾಗದಿದ್ದರೆ? ಕುಡಿಯಲು ಹಾಗೂ ಸ್ನಾನಕ್ಕೆ ಎಲ್ಲಿಗೆ ಹೋಗಬೇಕಾಗುತ್ತಿತ್ತು? ಕೆರೆ, ಬಾವಿ, ನದಿ, ಕಡಲ ತೀರಕ್ಕೆ ಪ್ರವಾಸ ಹೋಗಬೇಕಾಗುತ್ತಿತ್ತು ಅಲ್ಲವೇ? ಇದಕ್ಕಾಗಿ ಸಾಕಷ್ಟು ಹಣ ವೆಚ್ಚವಾಗುತ್ತಿತ್ತು.

ಈಗಿರುವ ನೀರಿನ ಮೂಲಗಳು ಬತ್ತಿ ಹೋದರೆ ಏನು ಮಾಡುವುದು? ಎಂಬ ಪ್ರಶ್ನೆ ಬಹುದಿನಗಳಿಂದ ಕಾಡುತ್ತಲೇ ಇದೆ. ಭೂಮಿಯ ಮೇಲೆ ಶೇ.70ರಷ್ಟು ನೀರು ಇದೆ. ಅದರಲ್ಲಿ ಬಹುಪಾಲು ನೀರು ಸಮುದ್ರದ ಉಪ್ಪು ನೀರು. ಕುಡಿಯಲು, ಸ್ನಾನ ಮಾಡಲು, ಬಳಸಲು ಯೋಗ್ಯವಲ್ಲದ ನೀರು.

ಸಮುದ್ರಕ್ಕೆ ಉಪ್ಪು ಬಂದದ್ದು...: ಸಮುದ್ರದಲ್ಲಿ ಯಾಕಿಷ್ಟು ಉಪ್ಪು ಸೇರಿದೆ? ಎಂಬುದು ಬಹುತೇಕರಿಗೆ ತಿಳಿದೇ ಇದೆ. ಸುಮಾರು 3.8 ಶತಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲ್ಮೈ ಮೇಲಿನ ಆವಿ ತಣ್ಣಗಾಗಿ ದ್ರವ ರೂಪಕ್ಕೆ ತಿರುಗಿತು. ಆಗ ನೀರಿಗೆ ಉಪ್ಪು ಸೇರಿರಲಿಲ್ಲ. ಆಗ ನಿಜಕ್ಕೂ ಸಾಗರಗಳ ನೀರು ತಾಜಾ ಆಗಿತ್ತು. ಆದರೆ ಇದು ಹಾಗೆಯೇ ಉಳಿಯಲಿಲ್ಲ. ಪ್ರತಿಬಾರಿ ಮಳೆಯಾದಾಗಲೆಲ್ಲ ನೀರು ಹರಿದು ನದಿ ತೊರೆಗಳನ್ನು ದಾಟಿ ಸಾಗುತ್ತಿತ್ತು. ಹೀಗೆ ಸಾಗುವಾಗ ಮಣ್ಣಿನಲ್ಲಿ ಕರಗಿದ ಒಂದಿಷ್ಟು ಲವಣಗಳು ನೀರಿಗೆ ಸೇರುತ್ತಲೇ ಸಾಗಿದವು. ಹೀಗೆ ಲವಣಯುಕ್ತ ನೀರು ಸಾಗರಗಳನ್ನು ಸೇರುತ್ತಲೇ ಹೋಯಿತು. ಬಿಸಿಲಿನ ತಾಪಕ್ಕೆ ನೀರು ಮಾತ್ರ ಆವಿಯಾಯಿತು. ಅದರಲ್ಲಿನ ಲವಣಗಳು ಅಲ್ಲಿಯೇ ಉಳಿದವು. ಸಾವಿರಾರು ವರ್ಷಗಳ ನಿರಂತರ ಪ್ರಕ್ರಿಯೆಯಿಂದ ಸಾಗರಗಳ ನೀರು ಕ್ರಮೇಣವಾಗಿ ಉಪ್ಪು ನೀರಾಗಿ ಪರಿವರ್ತನೆ ಹೊಂದಿತು. ಅಂದರೆ ಸಾಗರಗಳಲ್ಲಿ ಸಂಚಯವಾದ ಉಪ್ಪು 3.8 ತಕೋಟಿ ವರ್ಷಗಳ ಇತ್ತೀಚಿನದ್ದು.

ಸಮುದ್ರದಿಂದ ಉಪ್ಪನ್ನು ತೆಗೆದರೆ?: ವಾಸ್ತವವಾಗಿ ಸಮುದ್ರದಲ್ಲಿ ತುಂಬಾ ಉಪ್ಪು ಇದೆ. ಅದನ್ನೆಲ್ಲಾ ತೆಗೆದು ಹಾಕಿದರೆ ಹೇಗೆ? ಹೌದು ಒಳ್ಳೆಯ ಆಲೋಚನೆ. ಸಮುದ್ರದ ಉಪ್ಪನ್ನೆಲ್ಲಾ ತೆಗೆದರೆ ಅದನ್ನು ಹಾಕೋದು ಎಲ್ಲಿ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಒಂದು ವೇಳೆ ಉಪ್ಪನ್ನು ತೆಗೆದು ಅದನ್ನು ಭೂಮಿಯ ಮೇಲೆ ಸಮನಾಗಿ ಹರಡಿದರೆ ಅದು 40 ಅಂತಸ್ತಿನ ಕಟ್ಟಡದ ಎತ್ತರಕ್ಕೆ ಸಮನಾಗುತ್ತದೆ ಎಂದು ಊಹಿಸಲಾಗಿದೆ. ಹಾಗಾಗಿ ಸಮುದ್ರದಿಂದ ಉಪ್ಪನ್ನು ತೆಗೆದರೆ ಪ್ರಪಂಚವು ಯಾವ ರೀತಿ ಕಾಣಬಹುದು? ಊಹಿಸಿಕೊಳ್ಳಿ.

ಸಮುದ್ರದಿಂದ ಉಪ್ಪನ್ನು ತೆಗೆದರೆ ಸಾಗರಗಳು ಖಂಡಿತವಾಗಿಯೂ ದೇವತೆಗಳಂತೆ ಧ್ವನಿಸುತ್ತವೆ. ವಿಶ್ವದ ಮೂರನೇ ಒಂದು ಭಾಗ 2025ರ ವೇಳೆಗೆ ದೀರ್ಘಕಾಲದ ನೀರಿನ ಸಮಸ್ಯೆ ಎದುರಿಸಲಿವೆ ಎಂದು ಹೇಳಲಾಗುತ್ತದೆ. ಈಗಿನ ನಮ್ಮ ನೀರಿನ ಬಳಕೆಯ ದರದ ಲೆಕ್ಕಾಚಾರದ ಪ್ರಕಾರ ಜಾಗತಿಕ ನೀರಿನ ಬೇಡಿಕೆ ಪ್ರತಿ 20 ವರ್ಷಗಳಿಗೆ ಎರಡು ಪಟ್ಟು ಹೆಚ್ಚಾಗುತ್ತಿದೆ. ಒಂದು ವೇಳೆ ಸಾಗರಗಳ ನೀರು ತಾಜಾ ನೀರು ಅಗಿದ್ದರೆ ಸಾಗರಗಳ ನೀರೂ ಕಡಿಮೆಯಾಗುತ್ತಿತ್ತು.

ಜಲಚರಗಳ ಸಾವು: ಸಮುದ್ರದಲ್ಲಿ ಸರಿಸುಮಾರು 2,28,450 ಪ್ರಬೇಧಗಳ ಇಪ್ಪತ್ತು ಲಕ್ಷಕ್ಕೂ ಅಧಿಕ ಜೀವರಾಶಿಗಳಿವೆ. ಈ ಎಲ್ಲಾ ಜೀವಿಗಳು ಸಮುದ್ರದ ಉಪ್ಪು ನೀರಿನ ವಾತಾವರಣಕ್ಕೆ ಅನುಗುಣವಾಗಿ ತಮ್ಮ ದೇಹ ರಚನೆಯನ್ನು ಮಾರ್ಪಾಟು ಮಾಡಿಕೊಂಡಿವೆ. ಒಂದು ವೇಳೆ ಸಾಗರದ ನೀರು ನಿರ್ಜಲೀಕರಣಗೊಂಡರೆ ಎಂದಿಗೂ ಈ ಜೀವಿಗಳನ್ನು ಕಾಣಲು ಸಾಧ್ಯವೇ ಇಲ್ಲ. ಸಾಗರಗಳಲ್ಲಿ ಉಪ್ಪು ಇಲ್ಲವಾದರೆ ಕಡಲ ಜೀವಿಗಳು ಸಹ ಇನ್ನಿಲ್ಲವಾಗುತ್ತಿದ್ದವು.

ದ್ಯುತಿ ಸಂಶ್ಲೇಷಣೆ ಸ್ಥಗಿತ: ನಮ್ಮ ವಾತಾವರಣದ ಉಷ್ಣಾಂಶ ಹೆಚ್ಚಾಗಿ ಭೂವಾಸಿ ಜೀವಿಗಳ ಮೇಲೆ ಅಗಾಧ ಪರಿಣಾಮ ಉಂಟಾಗುತ್ತಿತ್ತು. ಭೂಮಿಯ ಮೇಲೆ ದ್ಯುತಿ ಸಂಶ್ಲೇಷಣೆಯಂತಹ ಮಹತ್ವ ಕ್ರಿಯೆ ನಡೆಯುತ್ತಲೇ ಇರಲಿಲ್ಲ. ಆಗ ಭೂಮಿಯ ಮೇಲೆ ಆಮ್ಲಜನಕದ ಕೊರತೆಯಾಗುತ್ತಿತ್ತು. ಜೀವಿಗಳ ವೈವಿಧ್ಯತೆ ನಶಿಸಿ, ಆಹಾರ ಸರಪಳಿ ಕುಸಿಯುತ್ತಿತ್ತು ಮತ್ತು ಅದೇ ವೇಳೆ ಇಂಗಾಲದ ಡೈ ಆಕ್ಸೈಡ್ ಹೆಚ್ಚಳವಾಗಿ ಹಸಿರು ಮನೆ ಪರಿಣಾಮ ಉಂಟಾಗುತ್ತಿತ್ತು. ಇದರಿಂದ ಜನ ಜೀವ ತುಂಬಾ ಕಷ್ಟಸಾಧ್ಯವಾಗುತ್ತಿತ್ತು.

ನೈಸರ್ಗಿಕ ವಿಕೋಪಗಳ ಹೆಚ್ಚಳ: ಸಮುದ್ರದ ನೀರಿನಲ್ಲಿ ಉಪ್ಪು ಇಲ್ಲದೇ ಹೋದರೆ ಭೂಮಿಯ ಮೇಲಿನ ಇಡೀ ಪ್ರಕ್ರಿಯೆಯು ಅಸ್ತವ್ಯಸ್ತಗೊಳ್ಳುತ್ತದೆ. ಭೂಮಿಯ ಮೇಲ್ಮೈಗಳು ತಂಪಾಗಿ, ಹವಾಮಾನದಲ್ಲಿ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಚಂಡಮಾರುತಗಳು ಹೆಚ್ಚು ಚಲನಶೀಲವಾಗುತ್ತವೆ ಮತ್ತು ಅವು ಪ್ರಾಣಾಂತಿಕ ವಾಗಬಹುದು. ಭೂಮಿಯು ನೈಸರ್ಗಿಕ ವಿಕೋಪಗಳ ತೀವ್ರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇಷ್ಟೆಲ್ಲಾ ಆಗುವ ವೇಳೆಗೆ ಭೂಮಿಯ ಮೇಲೆ ಏನಾಗುತ್ತದೆಂದು ನೋಡಲು ನಾವ್ಯಾರು ಇರುವುದಿಲ್ಲ. ಅಲ್ಲವೇ?

ಅಲ್ಪ ಪ್ರಯತ್ನ: ಸಮುದ್ರದ ನೀರಿನಿಂದ ಉಪ್ಪನ್ನು ತೆಗೆದು ತಾಜಾ ನೀರನ್ನು ಪಡೆಯುವಲ್ಲಿ ಅರಬ್ ರಾಷ್ಟ್ರಗಳು ಒಂದಿಷ್ಟು ಪ್ರಯತ್ನ ಮಾಡಿವೆ. ಈ ಪ್ರಕ್ರಿಯೆ ತುಂಬಾ ಶ್ರಮದಾಯಕ ಹಾಗೂ ವೆಚ್ಚದಾಯಕ. ಇದು ಕೇವಲ ಅಲ್ಪ ಪ್ರಮಾಣದ ಪ್ರಯತ್ನ. ಇದು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಶುದ್ಧ ನೀರು ಪಡೆಯಲು ಅನೇಕ ತಾಂತ್ರಿಕ ಮತ್ತು ನೈಸರ್ಗಿಕ ಸಮಸ್ಯೆಗಳು ಎದುರಾಗುತ್ತವೆ. ಇವೆಲ್ಲವನ್ನೂ ಮೀರಿದ ತಂತ್ರಜ್ಞಾನ ಮತ್ತು ಪ್ರಯತ್ನಗಳ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News