ಮನುಷ್ಯತ್ವ ಮೀರಿದ ಸಿದ್ಧಾಂತ ಜಗತ್ತಿನಲ್ಲೆ ಇಲ್ಲ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸಿದ್ದರಾಮಯ್ಯ

Update: 2019-12-15 12:20 GMT

ಬೆಂಗಳೂರು, ಡಿ. 15: ‘ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ. ಆದರೆ, ಮನುಷ್ಯತ್ವ ಎಲ್ಲಕ್ಕಿಂತ ಮುಖ್ಯ. ನನ್ನ ಯೋಗಕ್ಷೇಮ ವಿಚಾರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ರವಿವಾರ ಖಾಸಗಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡು ಮನೆಗೆ ತೆರಳುವ ಮುನ್ನ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇನ್ನೊಂದು ವಾರ ಸಂಪೂರ್ಣ ವಿಶ್ರಾಂತಿ ಪಡೆಯುತ್ತೇನೆ. ನಂತರ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇನೆ. ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ನಾನು ಉತ್ತರ ನೀಡುವುದಿಲ್ಲ’ ಎಂದರು.

‘ರಾಜ್ಯಾದ್ಯಂತ ಅಭಿಮಾನಿಗಳು ನನ್ನ ಆರೋಗ್ಯ ಸುಧಾರಣೆಯಾಗುವಂತೆ ಹರಕೆ, ಪೂಜೆಗಳನ್ನು ಸಲ್ಲಿಸಿದ್ದಾರೆ, ಕೆಲವರು ಆಸ್ಪತ್ರೆಗೆ ಬಂದು ಪ್ರಸಾದವನ್ನೂ ನೀಡಿದ್ದಾರೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಕಂಡು ಮಾತು ಹೊರಡುತ್ತಿಲ್ಲ. ನಿಮ್ಮೆಲ್ಲರಿಗೂ ಧನ್ಯವಾದಗಳು. ಜನಸೇವೆಯಲ್ಲಿರುವ ವ್ಯಕ್ತಿ ಇದಕ್ಕಿಂತ ಹೆಚ್ಚಿನದನ್ನು ಏನು ನಿರೀಕ್ಷಿಸಲು ಸಾಧ್ಯ’

‘ನಾನು ಆಸ್ಪತ್ರೆಯಲ್ಲಿದ್ದಾಗ ವಿವಿಧ ಸಮುದಾಯಗಳ ಮಠಾಧೀಶರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಪಕ್ಷಾತೀತವಾಗಿ ಹಲವು ನಾಯಕರು ನನ್ನನ್ನು ಭೇಟಿಯಾಗಿ ಧೈರ್ಯತುಂಬಿ, ಗುಣಮುಖರಾಗುವಂತೆ ಹಾರೈಸಿದ್ದಾರೆ. ಮನುಷ್ಯತ್ವ ಮೀರಿದ ಸಿದ್ಧಾಂತ ಜಗತ್ತಿನಲ್ಲೆ ಇಲ್ಲ. ಕಷ್ಟಕಾಲದಲ್ಲಿ ಜೊತೆಯಾದವರೆಲ್ಲರೂ ನಾನು ಕೃತಜ್ಞ’

‘ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆದು ಮನೆಗೆ ಮರಳುತ್ತಿದ್ದೇನೆ. ಹಿಂದಿನಂತೆ ಕೆಲಸ ಕಾರ್ಯಗಳನ್ನು ಕೈಗೊಳ್ಳುವಷ್ಟು ನನ್ನ ಆರೋಗ್ಯ ಸದೃಢವಾಗಿದೆ. ಯಾವ ಆತಂಕವೂ ಬೇಡ. ನಾನು ಮೊದಲಿನಂತೆ ಸಕ್ರಿಯವಾಗಿ ಜನಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆಯ ವೈದ್ಯರು, ಶುಶ್ರೂಷಕರು ಸೇರಿದಂತೆ ಎಲ್ಲ ಸಿಬ್ಬಂದಿಗಳು ಹೆಚ್ಚಿನ ಕಾಳಜಿ ವಹಿಸಿ ನನ್ನ ಆರೈಕೆ ಮಾಡಿದ್ದಾರೆ, ಮಾನಸಿಕವಾಗಿ ಧೈರ್ಯ ತುಂಬಿದ್ದಾರೆ. ಅವರೆಲ್ಲರ ಸೇವೆಗೆ ನಾನು ಆಭಾರಿ ಎಂದು ಸಿದ್ದರಾಮಯ್ಯ ಸ್ಮರಿಸಿದರು.

ಹುಲಿಯಾ ಮೇನಿಯಾ
‘ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿಮಾನಿಗಳು ಸಿದ್ದರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕಾರು ಹತ್ತುತ್ತಿದ್ದ ವೇಳೆ ಹುಲಿಯಾ..ಹುಲಿಯಾ ಹೌದೋ ಹುಲಿಯಾ.., ಸಿದ್ದರಾಮಯ್ಯನವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News