ಮುಸ್ಲಿಮರ ಮೇಲೆ ಕಲ್ಪಿತ ಸುಳ್ಳುಗಳನ್ನು ಸೃಷ್ಟಿಸಿ ದೇಶವನ್ನು ಒಡೆಯಲಾಗುತ್ತಿದೆ: ಪ್ರೊ.ಬರಗೂರು ರಾಮಚಂದ್ರಪ್ಪ

Update: 2019-12-15 12:39 GMT

ಬೆಂಗಳೂರು, ಡಿ.15: ಮುಸ್ಲಿಮ್ ಸಮುದಾಯದ ಮೇಲೆ ಕಲ್ಪಿತ ಸುಳ್ಳುಗಳನ್ನು ಸೃಷ್ಟಿಸುವ ಮೂಲಕ ದೇಶವನ್ನು ಒಡೆಯಲಾಗುತ್ತಿದೆ ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ರವಿವಾರ ಅಭಿವ್ಯಕ್ತಿ ದಾವಣಗೆರೆ ಪ್ರಕಾಶನ ನಗರದ ಕಸಾಪ ಸಭಾಂಗಣದಲ್ಲಿ ಆಯೋಜಿಸಿದ್ದ ಲೇಖಕ ಮಲ್ಲಿಕಾರ್ಜುನ ಕಡಕೋಳರ ‘ಯಡ್ರಾಮಿ ಸೀಮೆ ಕಥನಗಳು’ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮುಸ್ಲಿಮ್ ದೊರೆಗಳು ಕನ್ನಡ ವಿರೋಧಿಗಳು, ಸಂಸ್ಕೃತಿ ವಿರೋಧಿಗಳು ಎಂಬ ರೀತಿಯಲ್ಲಿ ಸುಳ್ಳುಗಳನ್ನು ಹರಡುತ್ತಾ ಬರಲಾಗಿದೆ. ಆದರೆ, ವಾಸ್ತವವಾಗಿ ಕನ್ನಡದ ಸಾಹಿತ್ಯದ ಸೃಜನಶೀಲತೆಗೆ ಮುಸ್ಲಿಮ್ ದೊರೆಗಳ ಕೊಡುಗೆ ಅಪಾರ. ಮುಖ್ಯವಾಗಿ ಸೂಫಿ, ತತ್ವಪದ, ಜನಪದ ಸಾಹಿತ್ಯ ಮುಸ್ಲಿಮ್ ದೊರೆಗಳ ಆಳ್ವಿಕೆಯಲ್ಲಿಯೇ ಹೆಚ್ಚು ಮುನ್ನೆಲೆಗೆ ಬಂದಿದ್ದು ಎಂಬುದನ್ನು ತಿಳಿಯಬೇಕಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಇನ್ನು ಮುನ್ನೆಲೆಗೆ ಬಾರದ ಅನೇಕ ಅಸ್ಪೃ ಶ್ಯ, ತಳ ಸಮುದಾಯಗಳ ಸಂಸ್ಕೃತಿಗಳಿವೆ. ಇವೆಲ್ಲವೂ ಪ್ರಧಾನ ಸಂಸ್ಕೃತಿಯ ದಬ್ಬಾಳಿಕೆಯಲ್ಲಿ ಮುಚ್ಚಿಹೋಗಿವೆ. ಇವುಗಳನ್ನು ಹೊರತೆಗೆದು ಮುನ್ನೆಲೆಗೆ ತಂದು ಮುಖಾಮುಖಿಗೊಳಿಸಿದಾಗ ಮಾತ್ರ ನಿಜವಾದ ಭಾರತದ ರಾಷ್ಟ್ರೀಯತೆ, ಬಹುಸಂಸ್ಕೃತಿಯನ್ನು ಕಟ್ಟಲು ಸಾಧ್ಯವೆಂದು ಅವರು ಅಭಿಪ್ರಾಯಿಸಿದರು.

ದೇಶಿ ಸಂಸ್ಕೃತಿಯೆಲ್ಲವೂ ಶ್ರೇಷ್ಟವೆಂದು ತಿಳಿಯಬಾರದು. ಹಾಗೆ ಒಪ್ಪಿಕೊಂಡುಬಿಟ್ಟರೆ ಜಾತಿಯಾಧಾರಿತ ಕುಲಕಸುಬುಗಳ ಉತ್ಪಾದನಾ ಪದ್ಧತಿಯನ್ನು ಸಮ್ಮತಿಸಿದಂತೆ ಆಗುತ್ತದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಕೈಗಾರೀಕರಣವು ಜಾತಿಚೌಕಟ್ಟನ್ನು ಮೀರಿ ಉತ್ಪಾದನೆಯಲ್ಲಿ ತೊಡಗುವಂತೆ ಮಾಡುವಲ್ಲಿ ಸ್ವಲ್ಪಮಟ್ಟಿಗಾದರು ಯಶಸ್ವಿಯಾಗಿದೆ. ಹೀಗಾಗಿ ಯಾವುದನ್ನು ನಾವು ಸರಾಸಗಟಾಗಿ ಒಪ್ಪಿಕೊಳ್ಳದೆ, ತಿರಸ್ಕರಿಸದೆ ಜನರ ಆಶಯಗಳಿಗೆ ಪೂರಕವಾಗಿರುವ ಅಂಶಗಳನ್ನು ಪ್ರತಿಯೊಂದರಿಂದಲೂ ಪಡೆದುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಬಂಡಾಯ ಸಾಹಿತಿ ಬಸವರಾಜ ಸಬರದ ಮಾತನಾಡಿ, ಹೈ.ಕ. ಇತಿಹಾಸದ ಹಾಗು-ಹೋಗುಗಳ ಕುರಿತು ರಾಜ್ಯದ ಎಲ್ಲ ಭಾಗಗಳ ಜನತೆಗೆ ಗೊತ್ತಿಲ್ಲ. ಇದನ್ನು ತಿಳಿಯುವ ಆಸಕ್ತಿಯಿದ್ದರೆ ಹಿರಿಯ ಲೇಖಕ ಮಲ್ಲಿಕಾರ್ಜುನ ಕಡಕೋಳರವರು ಐದು ದಶಕಗಳ ಹೈ-ಕ ಭಾಗದ ಸಾಂಸ್ಕೃತಿಕ, ಸಾಹಿತ್ಯ, ಸಾಮಾಜಿಕ ಹಾಗೂ ರಾಜಕೀಯ ಬದುಕನ್ನು ‘ಯಡ್ರಾಮಿ ಸೀಮೆ ಕಥನಗಳು’ ಕೃತಿಯಲ್ಲಿ ದಾಖಲಿಸಿದ್ದಾರೆ. ಇದನ್ನು ಓದುವ ಮೂಲಕ ಹೈ.ಕ. ಸಂಸ್ಕೃತಿಯನ್ನು ಅರಿಯಬಹುದು ಎಂದು ತಿಳಿಸಿದರು.

ಹೈ.ಕ ಭಾಗದ ಸಾಂಸ್ಕೃತಿಕ ಲೋಕವೇ ವೈಶಿಷ್ಟತೆಯಿಂದ ಕೂಡಿದ್ದಾಗಿದೆ. ಇಲ್ಲಿನ ಸಾಹಿತ್ಯ ಪಾಶ್ಚಾತ್ಯದಿಂದ ಪ್ರಭಾವಿತವಾಗಿಲ್ಲ. ಬದಲಿಗೆ, ಸೂಫಿ, ತತ್ವಪದಕಾರರು, ವಚನಕಾರರ ಪ್ರಭಾವಕ್ಕೆ ಒಳಗಾಗಿ ಬಂಡಾಯ, ಪ್ರಗತಿಪರ ಚಿಂತನೆಗಳ ಆಶಯಗಳನ್ನು ಒಳಗೊಂಡಿದೆ ಎಂದರು. ಕವಯಿತ್ರಿ ಎಚ್.ಎಲ್.ಪುಷ್ಪಾ, ಲೇಖಕ ಮಲ್ಲಿಕಾರ್ಜುನ ಕಡಕೋಳ ಹಾಜರಿದ್ದರು.

‘ಭಾರತದಲ್ಲೇ ಮಾತ್ರ ಜಾಗತೀಕರಣ ಏಕಮುಖವಾಗಿ ಚಲನೆಯಿಂದ ಕೂಡಿದ್ದು, ಕೇವಲ ಜಾತಿಗಳು ಮಾತ್ರ ಜಾಗತೀಕರಣಗೊಂಡಿವೆ. ವಿದೇಶದಲ್ಲಿ ಜಾತಿ ಸಂಘಗಳು, ಮಠಗಳನ್ನು ಸ್ಥಾಪಿಸಿರುವುದೇ ಭಾರತದ ಜಾಗತೀಕರಣವಾಗಿದೆ. ಅಮೆರಿಕಾ ತನ್ನ ದೇಶದ ರೈತರಿಗೆ ಶೇ.25ಕ್ಕೂ ಹೆಚ್ಚು ಸಬ್ಸಿಡಿ ನೀಡುತ್ತದೆ. ಆದರೆ, ಭಾರತ ರೈತರಿಗೆ ಕೇವಲ ಶೇ.3ರಷ್ಟು ಸಬ್ಸಿಡಿ ನೀಡುತ್ತಿದೆ. ಹೀಗಾಗಿ ನಮಗೆ ಬೇಕಿರುವುದು ಜಾತಿಯ ಜಾಗತೀಕರಣವಲ್ಲ. ವಿವೇಕದ ಜಾಗತೀಕರಣಬೇಕಾಗಿದೆ’

-ಪ್ರೊ.ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News