ಅನಂತಮೂರ್ತಿ ಸೃಜನಶೀಲ ಚಿಂತಕ: ಪ್ರೊ.ನಿಸಾರ್ ಅಹಮದ್

Update: 2019-12-15 12:43 GMT

ಬೆಂಗಳೂರು, ಡಿ.15: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಡಾ.ಯು.ಆರ್. ಅನಂತಮೂರ್ತಿ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಸೃಜನಶೀಲ ಚಿಂತಕರು ಎಂದು ಹೆಸರು ಪಡೆದಿದ್ದವರು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಬಣ್ಣಿಸಿದ್ದಾರೆ.

ರವಿವಾರ ಕನ್ನಡ ಭವನದ ನಯನ ಸಭಾಂಗಣದಲ್ಲಿ ಭಾಗವತರು ಸಾಂಸ್ಕೃತಿಕ ಸಂಘಟನೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಏರ್ಪಡಿಸಿದ್ದ ಅನಂತಮೂರ್ತಿ ಮರು ಓದಿನ ನೆಲೆಗಳು, ರಾಷ್ಟ್ರೀಯ ವಿಚಾರ ಸಂಕಿರಣ, ಸಾಕ್ಷಚಿತ್ರ ಪ್ರದರ್ಶನ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅನಂತಮೂರ್ತಿ ಅವರು ತಮ್ಮ ಕೃತಿಗಳ ಮೂಲಕ ನಮ್ಮನ್ನು ನಾವೇ ಒಳಹೊಕ್ಕು ನೋಡುವಂತೆ ಮಾಡುವ, ಸಮಕಾಲೀನ ವಾಸ್ತವ ದ್ವಂದ್ವಗಳಿಗೆ ನಮ್ಮನ್ನು ಕೈಹಿಡಿದು ಕರೆದೊಯ್ಯುವುದರ ಜತೆ ಏಕಕಾಲದಲ್ಲಿ ಒಳಗಿನವರಂತೆ ಆಪ್ತವಾಗಿಯೂ, ಹೊರಗಿನವರಂತೆ ವಿಶ್ಲೇಷಣಾತ್ಮಕ, ಸಮಕಾಲೀನ ಸಮಸ್ಯೆಗಳ ಬಗ್ಗೆ ಚಿಂತಿಸುವವರಾಗಿಯೂ ಮೂಡುವ ಅವರು, ಕನ್ನಡ ಸಂಸ್ಕೃತಿ ಕಂಡ ವಿಶಿಷ್ಟ ಪ್ರತಿಭೆ ಎಂದರು.

‘ಆವಾಹನೆ’ ಅನಂತಮೂರ್ತಿಯವರು ಬರೆದಿರುವ ಏಕೈಕ ನಾಟಕ. ಸೃಜನಶೀಲ ಚಿಂತಕರಾದ ಅವರು ಹಲವಾರು ಉತ್ತಮ ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರಜ್ಞೆ-ಪರಿಸರ, ಸೃಜನಶೀಲತೆ-ತತ್ವಚಿಂತನೆ, ಶೂದ್ರ-ಬ್ರಾಹ್ಮಣ, ಜಗಲಿ-ಹಿತ್ತಿಲು ಹೀಗೆ ಅನೇಕ ಪರಿಕಲ್ಪನೆಗಳನ್ನು ಕನ್ನಡ ಸಂಸ್ಕೃತಿಗೆ ನೀಡಿದ್ದಾರೆ ಎಂದರು.

ಸಾಹಿತಿ ಎಚ್.ಎಸ್. ಶಿವಪ್ರಕಾಶ್ ಮಾತನಾಡಿ, ಅನಂತಮೂರ್ತಿ ಅವರು ಸರಳ, ಸಜ್ಜನಿಕೆಯ ವ್ಯಕ್ತಿ. ತಾವು ಬೆಳೆಯುವುದರ ಜತೆಗೆ ಯುವ ಕವಿಗಳನ್ನು ಬೆಳೆಸುವ ಪ್ರವೃತ್ತಿ ಹೊಂದಿದ್ದವರು. ಗಂಭೀರ ವಿಮರ್ಶಕರಾಗಿದ್ದ ಅವರು ಎಂದೂ ನಿಂತ ನೀರಂತೆ ನಿಲ್ಲಲಿಲ್ಲ ಎಂದರು.

ಈ ಸಂದರ್ಭದಲ್ಲಿ ಯುವ ಸಾಹಿತಿ ಚಂದನಗೌಡ ಬರೆದಿರುವ ‘ಎ ಲೈಫ್ ಇನ್ ದ ವರ್ಲ್ಡ್’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಎಂ.ಎಸ್. ಆಶಾದೇವಿ, ಭಾಗವತರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಕೆ.ರೇವಣ್ಣ, ಗೌರವಾಧ್ಯಕ್ಷ ಸುನೀಲ್ ಮಲ್ಲೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News