ಸಮಾಜವಾದಿ ಚಳವಳಿಯನ್ನು ಮುನ್ನಡೆಸಲು ನಾಯಕರೇ ಇಲ್ಲ: ಎಚ್.ಎಸ್.ದೊರೆಸ್ವಾಮಿ

Update: 2019-12-15 14:15 GMT

ಬೆಂಗಳೂರು, ಡಿ.15: ದೇಶದಲ್ಲಿ ಭೀಕರ ಪರಿಸ್ಥಿತಿ ತಲೆದೋರಿರುವ ಈ ಸಂದರ್ಭದಲ್ಲಿ ಸಮಾಜವಾದಿ ಚಳವಳಿಯನ್ನು ಮುನ್ನಡೆಸಲು ನಾಯಕರೇ ಇಲ್ಲದಂತಾಗಿದೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ಸಮಾಜವಾದಿ ಅಧ್ಯಯನ ಕೇಂದ್ರ, ರಾಷ್ಟ್ರ ಸೇವಾ ದಳ, ಹಿಂದ್ ಮಜ್ದೂರ್ ಸಭಾ, ಕರ್ನಾಟಕ ರಾಜ್ಯ ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಜಂಟಿಯಾಗಿ ಮಹಾತ್ಮಗಾಂಧಿ-ಕಸ್ತೂರ ಬಾ 150ನೆ ವರ್ಷಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ‘ಪರ್ಯಾಯ ವ್ಯವಸ್ಥೆಗಾಗಿ ರಾಷ್ಟ್ರಮಟ್ದ ಸಮಾಜವಾದಿ ಸಮಾಗಮ’ದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ ಅಂತಹ ನಾಯಕರು ಸಮಾಜವಾದಿ ಚಳವಳಿಯ ನಾಯಕರಾಗಿ, ಜನ ವಿರೋಧಿ ನೀತಿಗಳ ವಿರುದ್ಧ ಬೀದಿಗಿಳಿದಿದ್ದರು. ಲೋಹಿಯಾ, ಜೆಪಿ ಸೇರಿದಂತೆ ಅನೇಕ ನಾಯಕರು ಕಟ್ಟಿ ಬೆಳೆಸಿದ ಚಳವಳಿಯಿಂದು ಬಡವಾಗಿದೆ ಎಂದು ಅವರು ವಿಷಾಧಿಸಿದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಹಲವಾರು ಜನ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿದ್ದಾರೆ. ದೇಶದ ಜನರ ಅಸ್ತಿತ್ವವನ್ನು ದಮನ ಮಾಡಲು ಮುಂದಾಗಿದ್ದಾರೆ. ಇದರ ವಿರುದ್ಧ ಧ್ವನಿ ಎತ್ತುವವರೇ ಇಲ್ಲದಾಗಿದೆ ಎಂದು ಹೇಳಿದರು.

ಸಮಾಜವಾದಿ ಚಳವಳಿಗಾರರಲ್ಲಿ ಇಂದಿಗೂ ಹಿರಿಯರೇ ಕೆಲಸ ಮಾಡುತ್ತಿದ್ದಾರೆ. ಅವರೂ, ಚಳವಳಿಯಿಂದ ದೂರ ಸರಿಯುವ ಕಾಲ ಸನ್ನಿಹಿತವಾಗುತ್ತಿದೆ. ಹೀಗಾಗಿ, ಯುವ ಸಮುದಾಯವನ್ನು ಚಳವಳಿ ಕಡೆಗೆ ಆಕರ್ಷಿಸಬೇಕಿದೆ. ಅವರಲ್ಲಿ ಸಮಾಜವಾದಿ ಚಿಂತನೆಗಳನ್ನು ಬಿತ್ತಬೇಕಿದೆ ಎಂದರು.

ಕ್ರಾಂತಿಗೆ ಹತ್ತಿರವಾಗಿದ್ದೇವೆ: ನಮ್ಮನ್ನಾಳುವ ಪ್ರಭುತ್ವಗಳು ಜಾರಿ ಮಾಡುತ್ತಿರುವ ನೀತಿಗಳು ಜನವಿರೋಧಿಯಾಗಿವೆ. ಇದರ ವಿರುದ್ಧ ಈಗಾಗಲೇ ಜನರು ದಂಗೆ ಎದ್ದಿದ್ದಾರೆ. ಮುಂದೊಂದು ದಿನ ಕ್ರಾಂತಿಯೇ ನಡೆಯಲಿದೆ. ಆದರೆ, ಕ್ರಾಂತಿಯಲ್ಲಿ ಪಾಲ್ಗೊಳ್ಳುವ ಜನರು ಯಾರಿದ್ದಾರೆ ಎಂದು ನಾವು ಪ್ರಶ್ನಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕರ್ನಾಟಕವು ದಲಿತ, ಮಹಿಳಾ, ಕಾರ್ಮಿಕ, ವಿದ್ಯಾರ್ಥಿ-ಯುವಜನರು ಸೇರಿದಂತೆ ಹಲವಾರು ಚಳವಳಿಗಳಿಗೆ ಹೆಸರುವಾಸಿಯಾಗಿದೆ. ಹಲವು ಚಳವಳಿಗಳು ದೇಶ ಹಾಗೂ ರಾಜ್ಯಗಳ ಮೇಲೆ ವ್ಯಾಪಕ ಪರಿಣಾಮವನ್ನೂ ಬೀರಿವೆ ಎಂದರು.

ದೇಶದಲ್ಲಿ ಬಲಿಷ್ಟವಾದ ರಾಜಕೀಯ ಶಕ್ತಿಯನ್ನು ಕಟ್ಟಬೇಕಿದೆ ಎಂದ ಅವರು, ಆರೆಸ್ಸೆಸ್ ಹಾಗೂ ಬಿಜೆಪಿ ಭ್ರಷ್ಟ, ಅತ್ಯಾಚಾರಿ, ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಗೆಲ್ಲಿಸಲು ತಳ ಮಟ್ಟದಿಂದ ಕೆಲಸ ಮಾಡುತ್ತದೆ. ಆದರೆ, ಸಾಮಾಜಿಕ ಜವಾಬ್ದಾರಿ, ಮುನ್ನೋಟವುಳ್ಳವರನ್ನು ಗೆಲ್ಲಿಸಲು ನಾವು ಮುಂದಾಗಬೇಕು. ಅದಕ್ಕಾಗಿ ಪರ್ಯಾಯ ರಾಜಕೀಯವನ್ನು ಸೃಷ್ಟಿಸಬೇಕು. ಅದಕ್ಕೆ ಇದು ಸೂಕ್ತ ಕಾಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News