ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಬೆಂಗಳೂರಿನಲ್ಲಿ ಹಲವು ಸಂಘಟನೆಗಳಿಂದ ಪ್ರತಿಭಟನೆ

Update: 2019-12-19 06:58 GMT

ಬೆಂಗಳೂರು, ಡಿ.15: ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಈಶಾನ್ಯ ಭಾರತೀಯ ನಾಗರಿಕರು ಸೇರಿದಂತೆ ಹತ್ತಾರು ಸಂಘಟನೆಗಳು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರವಿವಾರ ನಗರದ ಪುರಭವನದ ಮುಂಭಾಗ ಅಖಿಲ ಭಾರತೀಯ ಅಸ್ಸಾಂ, ತ್ರಿಪುರ ವಿದ್ಯಾರ್ಥಿ ಸಂಘ, ಭಾರತೀಯ ಈಶಾನ್ಯ ನಾಗರಿಕ ಬೆಂಗಳೂರು ಸಂಘ ಸೇರಿದಂತೆ ಪ್ರಗತಿಪರ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಜಮಾಯಿಸಿದ ಸಾವಿರಾರು ಪ್ರತಿಭಟನಾಕಾರರು, ಈ ಕೂಡಲೇ ಪೌರತ್ವ ತಿದ್ದುಪಡಿ ಕಾಯ್ದೆ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ಭೌತಿಕವಾಗಿ ಈಶಾನ್ಯದ ಏಳು ರಾಜ್ಯಗಳು ಬೇರೆ ಬೇರೆಯಾಗಿದ್ದರೂ ನಾವು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ಬೆಂಗಳೂರಿನಲ್ಲೂ ಪ್ರತಿಭಟನೆ ನಡೆಸುವ ಮೂಲಕ ಬಿಜೆಪಿ ನೇತೃತ್ವದ ಸರಕಾರಕ್ಕೆ ನೀಡಿದ್ದೇವೆ. ಈ ಕಾಯ್ದೆ ಪರಿಣಾಮ ಭಾರೀ ಸಂಖ್ಯೆಯಲ್ಲಿ ಅಕ್ರಮ ನುಸುಳುಕೋರರಿಗೆ ಭಾರತದ ಪೌರತ್ವ ಲಭಿಸಲಿದೆ. ಇದು ಅಪಾಯಕಾರಿ ಎಂದು ನಾರ್ಥ್ ಈಸ್ಟ್ ಸ್ಟೂಡೆಂಟ್ಸ್ ಯೂನಿಯನ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭೆಯಲ್ಲಿ ಸಂಖ್ಯಾಬಲ ಇದೆ ಎಂಬ ಕಾರಣಕ್ಕೆ ಸರಕಾರ ಈ ಕಾಯ್ದೆಯನ್ನು ನಮ್ಮ ಮೇಲೆ ಹೇರಿ, ಹಿಂದೂ ಸಮುದಾಯದ ಅಕ್ರಮ ವಲಸಿಗರಿಗೆ ಪೌರತ್ವ ನೀಡುತ್ತಿದೆ. ಇದು 1985ರ ಅಸ್ಸಾಂ ಒಪ್ಪಂದದ ಉಲ್ಲಂಘನೆಯಾಗಿದೆ.

1971ರ ಬಳಿಕ ಅಸ್ಸಾಂಗೆ ಬಂದಿರುವ ಎಲ್ಲ ನುಸುಳುಕೋರರನ್ನು, ಜಾತಿ ಧರ್ಮಗಳ ಭೇದವಿಲ್ಲದೆ, ಹೊರಗೆ ಕಳುಹಿಸುವ ವಿಚಾರ ಅಸ್ಸಾಂ ಒಪ್ಪಂದದಲ್ಲಿ ಉಲ್ಲೇಖವಾಗಿದೆ. ಆದ್ದರಿಂದ ಈ ಕಾಯ್ದೆಯನ್ನು ನಾವು ಒಪ್ಪುವುದಿಲ್ಲ. ಅಕ್ರಮ ನುಸುಳುಕೋರರ ರಾಜ್ಯವಾಗಿ ಅಸ್ಸಾಂ ಬಳಕೆಯಾಗುವುದನ್ನು ಒಪ್ಪಲಾಗದು ಪ್ರತಿಭಟನಾ ನಿರತರು ದೂರಿದರು.

‘ಎನ್‌ಆರ್‌ಸಿ, ಸಿಎಎ ಬೇಡ’
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಎನ್‌ಆರ್‌ಸಿ ಮತ್ತು ಸಿಎಎ ಹಾಗೂ ಬಾಬರಿ ಮಸೀದಿ ತೀರ್ಪು ಖಂಡಿಸಿ ದಸ್ತೂರ್ ಬಚಾವೋ ಘೋಷಣೆ ಯೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಹಲವು ಹೋರಾಟಗಳು ನಡೆಯುತ್ತಿದ್ದು, ಸರಕಾರ ಈ ಕುರಿತು ಕಿಂಚಿತ್ತೂ ಪ್ರತಿಕ್ರಿಯೆ ನೀಡುತ್ತಿಲ್ಲ. ಬದಲಾಗಿ ಅಸ್ಸಾಮಿನಲ್ಲಿ ಪ್ರತಿಭಟನಕಾರರ ಮೇಲೆ ಗೋಲಿಬಾರ್ ನಡೆಸಿ ಹತ್ಯೆಗೈದಿರುವುದು ಖಂಡನೀಯ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ನಾವು ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕು ಕಟ್ಟಿಕೊಳ್ಳುತ್ತಿದ್ದೇವೆ. ಆದರೆ, ಇಂತಹ ಕಾಯ್ದೆಗಳಿಂದ ಸಮಾಜವನ್ನು ಒಡೆಯುವ ಕೆಲಸ ಆಗುತ್ತದೆ, ಹೊರತು, ಅಭಿವೃದ್ಧಿ ಮಾತ್ರ ಅಲ್ಲ.
-ಡಾ.ರಾಮಚಂದ್ರ ಗುಹಾ, ಇತಿಹಾಸಕಾರ 

ಸಂಚಾರ ದಟ್ಟಣೆ
ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪುರಭವನ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದ ಪರಿಣಾಮ ಇಲ್ಲಿನ ಕಾರ್ಪೋರೇಷನ್ ವೃತ್ತ, ಜೆಸಿ ರಸ್ತೆ, ಬನ್ನಪ್ಪ ಪಾರ್ಕ್ ರಸ್ತೆ, ಕೆಆರ್‌ ಮಾರ್ಕೆಟ್ ಮಾರ್ಗ ವ್ಯಾಪ್ತಿಯಲ್ಲಿ ಸಾಲು ಸಾಲಾಗಿ ವಾಹನಗಳು ನಿಂತಿದ್ದ ದೃಶ್ಯ ಕಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News