ಬಹುತ್ವಗಳು ಅಪಾಯಕ್ಕೆ ಸಿಲುಕಿರುವ ದೇಶಕ್ಕೆ ಈಗ ಅನಂತಮೂರ್ತಿ ಅಗತ್ಯವಿತ್ತು: ಡಾ.ಮರುಳಸಿದ್ದಪ್ಪ

Update: 2019-12-15 15:10 GMT

ಬೆಂಗಳೂರು, ಡಿ.15: ಇವತ್ತು ದೇಶದಲ್ಲಿ ಬಹುಸಂಸ್ಕೃತಿ ಹಾಗೂ ಬಹುತ್ವಗಳು ಅಪಾಯಕ್ಕೆ ಸಿಲುಕಿರುವ ಸಂದರ್ಭದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು.ಆರ್.ಅನಂತಮೂರ್ತಿ ನಮ್ಮ ನಡುವೆ ಇರಬೇಕಿತ್ತು ಎಂದು ಹಿರಿಯ ನಾಟಕಕಾರ ಡಾ.ಕೆ.ಮರುಳ ಸಿದ್ದಪ್ಪ ಅಭಿಪ್ರಾಯಿಸಿದರು.

ರವಿವಾರ ಭಾಗವತರು ಸಾಂಸ್ಕೃತಿಕ ಸಂಘಟನೆ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಡಾ.ಯು.ಆರ್.ಅನಂತಮೂರ್ತಿ ಮರು ಓದಿನ ನೆಲೆಗಳು’ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮನ್ನಾಳುವ ಪ್ರಭುತ್ವವೇ ದೇಶದಲ್ಲಿ ಜನವಿರೋಧಿ ನೀತಿಗಳನ್ನು ಜಾರಿ ಮಾಡಲು ಮುಂದಾಗಿದೆ. ಇಂತಹ ಸಂದರ್ಭದಲ್ಲಿ ಜನತೆಗೆ ಸರಿಯಾದ ಧಿಕ್ಕು ದೆಸೆಗಳನ್ನು ತೋರಿಸುವಂತಹ ಚಿಂತಕರ ಅಗತ್ಯವಿದೆ. ಆದರೆ, ಇವತ್ತು ಅಂತಹ ಬುದ್ದಿಜೀವಿಗಳ ಕೊರತೆಯಿದೆ. ಈಗ ಯು.ಆರ್.ಅನಂತಮೂರ್ತಿ ನಮ್ಮ ನಡುವೆ ಇದಿದ್ದರೆ, ಜನವಿರೋಧಿ ಪ್ರಭುತ್ವಕ್ಕೆ ತಮ್ಮ ಚಿಂತನೆಗಳ ಮೂಲಕವೇ ಸರಿಯಾದ ಪಾಠ ಕಲಿಸುತ್ತಿದ್ದರು ಎಂದು ಅವರು ಹೇಳಿದರು.

ಯು.ಆರ್.ಅನಂತಮೂರ್ತಿ ಬರಹಗಾರರಾಗಿ ಮಾತ್ರ ಜಗತ್ತಿಗೆ ಗೊತ್ತಿದೆ. ಆದರೆ, ಅವರೊಬ್ಬ ಶ್ರೇಷ್ಟ ಪ್ರಾಧ್ಯಾಪಕರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯಾದ್ಯಂತ ಸಾವಿರಾರು ಪ್ರಜ್ಞಾವಂತ ವಿದ್ಯಾರ್ಥಿಗಳನ್ನು ಹುಟ್ಟು ಹಾಕಿದ್ದಾರೆ. ಹಾಗೆಯೇ ಕುಲಪತಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಉತ್ತಮ ಆಡಳಿತಗಾರರಾಗಿಯೂ ಹೆಸರುವಾಸಿಯಾಗಿದ್ದರು ಎಂದು ಅವರು ಹೇಳಿದರು.

ಯು.ಆರ್.ಅನಂತಮೂರ್ತಿ ಪತ್ನಿ ಎಸ್ತಾರ್ ಮಾತನಾಡಿ, ಯು.ಆರ್.ಅನಂತ ಮೂರ್ತಿ ಯಾವಾಗಲೂ ತಮ್ಮ ವಿದ್ಯಾರ್ಥಿಗಳೊಂದಿಗೆ ಕಾಲ ಕಳೆಯುತ್ತಿದ್ದರು. ಅವರು ನನ್ನೊಂದಿಗೆ ಸಮಯ ಕಳೆದಿದ್ದು ಕಡಿಮೆ. ಹೆಚ್ಚಿನ ಸಮಯ ಸಾಹಿತ್ಯ ಚರ್ಚೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ, ಭಾಗವತರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ರೇವಣ್ಣ. ಗೌರವ ಅಧ್ಯಕ್ಷ ಸುನೀಲ್ ಮಲ್ಲೇಶ ಮತ್ತಿತರರಿದ್ದರು.

‘ಪೂರ್ಣಚಂದ್ರ ತೇಜಸ್ವಿ, ಪಿ.ಲಂಕೇಶ್ ಹಾಗೂ ಯು.ಆರ್.ಅನಂತಮೂರ್ತಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೊಸರೂಪ ಕೊಟ್ಟವರು. ಅವರು ತಮ್ಮ ಬದುಕನ್ನು ಕೇವಲ ಬರವಣಿಗೆಗೆ ಮಾತ್ರ ಸೀಮಿತಗೊಳಿಸಲಿಲ್ಲ. ಸಾಮಾಜವಾದಿ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಜನರ ಆಶೋತ್ತರಗಳಿಗೆ ನೇರವಾಗಿ ಸ್ಪಂದಿಸುತ್ತಿದ್ದರು. ಹೀಗಾಗಿ ಅವರ ಚಿಂತನೆಗಳು ಯುವ ತಲೆಮಾರಿಗೆ ಸದಾ ಪ್ರೇರಣಾದಾಯಕವಾಗಿವೆ’

-ಡಾ.ಕೆ.ಮರುಳಸಿದ್ದಪ್ಪ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News