ಲಾಲ್‌ಬಾಗ್: ಜ.17ರಿಂದ ಗಣರಾಜ್ಯೋತ್ಸವ ಪ್ರಯುಕ್ತ ಫಲಪುಷ್ಪ ಪ್ರದರ್ಶನ

Update: 2019-12-15 15:20 GMT
ಫೈಲ್ ಚಿತ್ರ

ಬೆಂಗಳೂರು, ಡಿ.15: ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನ ಜ.17 ರಿಂದ 26ರ ವರೆಗೆ ನಗರದ ಲಾಲ್‌ಬಾಗ್ ಗಾಜಿನ ಮನೆಯಲ್ಲಿ ನಡೆಯಲಿದ್ದು, ಈ ಬಾರಿ ಸ್ವಾಮಿ ವಿವೇಕಾನಂದರಿಗೆ ಪ್ರದರ್ಶನವನ್ನು ಅರ್ಪಿಸಲಾಗಿದೆ.

ಅಮೆರಿಕದ ಚಿಕಾಗೊದಲ್ಲಿ ನಡೆದ ಸರ್ವಧರ್ಮ ಸಂಸತ್‌ನಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣಕ್ಕೆ 126 ವರ್ಷ ಸಲ್ಲುತ್ತಿದೆ. ಇದರ ಸವಿನೆನಪಿಗಾಗಿ ಸ್ವಾಮಿ ವಿವೇಕಾನಂದರ ಹೂವಿನ ಆಕರ್ಷಕ ಪ್ರತಿಮೆಯನ್ನು ನಿರ್ಮಿಸುವ ಮೂಲಕ ಸ್ವಾಮಿ ವಿವೇಕಾನಂದರು ಮತ್ತು ಅವರ ಚಿಂತನೆಗಳನ್ನು ಲಾಲ್‌ಬಾಗ್‌ನಲ್ಲಿ ಪ್ರತಿನಿಧಿಸಲು ನಿರ್ಧರಿಸಲಾಗಿದೆ.

ಸ್ವಾಮಿ ವಿವೇಕಾನಂದರ ತತ್ವ, ಸಿದ್ಧಾಂತಗಳನ್ನು ಬಣ್ಣ ಬಣ್ಣದ ಪುಷ್ಪಗಳಿಂದ ಯುವ ಸಮೂಹ ಹಾಗೂ ಸಮಾಜಕ್ಕೆ ತಿಳಿಸಲು ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘಗಳು ಮುಂದಾಗಿವೆ.

ರಾಮಕೃಷ್ಣ ಮಿಷನ್‌ನಿಂದ ಮಾಹಿತಿ: ವಿವೇಕಾನಂದರ ಜೀವನ ಕುರಿತಂತೆ ಸಂಪೂರ್ಣ ಇತಿಹಾಸವನ್ನು ಪ್ರದರ್ಶನದಲ್ಲಿ ಅಳವಡಿಸಲಾಗುವುದು. ಅವರ ಜೀವನ ಕುರಿತ ಹೆಚ್ಚಿನ ಮಾಹಿತಿಯನ್ನು ರಾಮಕೃಷ್ಣ ಮಿಷನ್‌ನಿಂದ ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ವಿವೇಕಾನಂದರ ಬಾಲ್ಯದ ಜೀವನ, ಶಿಕ್ಷಣ ಮತ್ತು ಧಾರ್ಮಿಕ ಸೇವೆ ಕುರಿತಂತೆ ಮಾಹಿತಿ ಪಡೆದು ಮಿಷನ್‌ನ ಸಲಹೆಯಂತೆ ಪ್ರದರ್ಶನ ಆಯೋಜಿಸಲಾಗುವುದು.

ಕನ್ಯಾಕುಮಾರಿಯ ಸ್ಮಾರಕ: ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಸ್ಮಾರಕ ಶಿಲಾ ಬಂಡೆಯ ಮೇಲೆ ಸ್ವಾಮಿ ವಿವೇಕಾನಂದರು ನಿಂತಿರುವ ದೃಶ್ಯ ಅತ್ಯಂತ ಆಕರ್ಷಣೀಯವಾಗಿದ್ದು, ಅದೇ ಮಾದರಿಯಲ್ಲಿ ಲಪುಷ್ಪ ಪ್ರದರ್ಶನದಲ್ಲಿ ಈ ಸ್ಮಾರಕವನ್ನು ನಿರ್ಮಿಸಲು ಆಯೋಜಕರು ನಿರ್ಧರಿಸಿದ್ದಾರೆ. ಇದರೊಂದಿಗೆ ಮಕ್ಕಳಿಗಾಗಿ ಸಂಗೀತ ಪರಿಕರ, ಪಕ್ಷಿಗಳ ಆಕರ್ಷಣೆ ಇತ್ಯಾದಿಗಳು ಗಮನ ಸೆಳೆಯಲಿವೆ.

ದರ ಹೆಚ್ಚಳದ ಪ್ರಸಾಪ: ಫಲಪುಷ್ಪ ಪ್ರದರ್ಶನಕ್ಕೆ ರಜಾ ಹಾಗೂ ಸಾಮಾನ್ಯ ದಿನಗಳಲ್ಲಿ ಒಬ್ಬರಿಗೆ 70 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಆದರೆ ಈ ಬಾರಿ 10 ರೂ. ಹೆಚ್ಚಳ ಮಾಡುವ ಬಗ್ಗೆ ಚರ್ಚೆಯಾಗಿದೆ. ಈ ಕುರಿತು ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಆದರೆ ದರ ಹೆಚ್ಚು ಮಾಡಿದರೆ ವೀಕ್ಷಕರಿಗೆ ಹೊರೆಯಾಗುವುದು ಗ್ಯಾರಂಟಿ.

ಕಳೆದ ಆಗಸ್ಟ್‌ನಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದ ಸಂದರ್ಭದಲ್ಲಿಯೇ ವಿವೇಕಾನಂದರ ಕುರಿತು ಪ್ರದರ್ಶನ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಸರಕಾರ ಜಯಚಾಮರಾಜೇಂದ್ರ ಒಡೆಯರ್ ಅವರ 150ನೇ ಜನ್ಮ ಶತಮಾನೋತ್ಸವ ಅಂಗವಾಗಿ ಮೈಸೂರು ಒಡೆಯರ್ ಅವರ ಕುರಿತು ಪ್ರದರ್ಶನ ಮಾಡುವಂತೆ ಸೂಚಿಸಿದ್ದರಿಂದ ಆಗಸ್ಟ್‌ನಲ್ಲಿ ಈ ಥೀಮ್ ಅನ್ನು ಕೈಬಿಟ್ಟಿದ್ದೆವು. ಇದೀಗ ಜನವರಿಯಲ್ಲಿ ಅದನ್ನು ಮಾಡುತ್ತಿದ್ದೇವೆ.

-ಎಂ.ಕುಪ್ಪುಸ್ವಾಮಿ ಗೌರವ ಖಜಾಂಚಿ, ಮೈಸೂರು ಉದ್ಯಾನ ಕಲಾಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News