ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೊಸ ದಾಖಲೆ ಬರೆದ ಬೆಂಗಳೂರಿನ ಬಾಲಕಿ

Update: 2019-12-15 17:32 GMT

ಬೆಂಗಳೂರು, ಡಿ.15: ಬಹುತೇಕರಿಗೆ ಕಬ್ಬಿಣದ ಕಡಲೆಯಾಗಿರುವ ಹಳಗನ್ನಡವನ್ನು ಹರಳು ಉರಿದಂತೆ ಮಾತನಾಡುವ ಕೇವಲ ಹನ್ನೊಂದು ವರ್ಷದ ಬೆಂಗಳೂರಿನ ಸಮೃದ್ಧಿ ಎ. ಯಾದವ್ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಪೋಸ್ಟ್ ಕಾರ್ಡ್‌ನಲ್ಲಿ ಅತೀ ಹೆಚ್ಚು ಬಾರಿ ಅಂದರೆ 852 ಬಾರಿ ಕನ್ನಡ ಕಣ್ಮಣಿ ಎಂದು ಬರೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಬೆಂಗಳೂರಿನ ವಿಶ್ವ ಕಲಾನಿಕೇತನ ಶಾಲೆಯಲ್ಲಿ 6ನೆ ತರಗತಿಯಲ್ಲಿ ಓದುತ್ತಿರುವ ಸಮೃದ್ಧಿ ಸಾಧನೆ ಕೇವಲ ಇಷ್ಟಕ್ಕೆ ಸೀಮಿತವಾಗಿಲ್ಲ. ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಮಾತನಾಡುವ ನಿರೂಪಕಿಯಾಗಬೇಕೆಂಬ ಆಸೆ ಹೊಂದಿರುವ ಈ ಬಾಲಕಿ ಎಂಟು ವರ್ಷವಿದ್ದಾಗ ಹಳೆಗನ್ನಡ ಕಲಿಕೆ ಆರಂಭಿಸಿದ್ದರು. ಕನ್ನಡವನ್ನು ಮತ್ತಷ್ಟು ಸಮೃದ್ಧಿಗೊಳಿಸಲು ಪಣತೊಡುವ ಮೂಲಕ, ಕನ್ನಡ ಪ್ರೇಮಿಗಳ ಮನಸೂರೆಗೊಂಡಿದ್ದಾರೆ. ಜತೆಗೆ ಕನ್ನಡ ಕಣ್ಮಣಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸಮೃದ್ಧಿಯ ಕನ್ನಡ ಪ್ರೀತಿ ಕಂಡು ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಂದಹಾಗೆ ಅನಿಲ್ ಕುಮಾರ್ ಯಾದವ್ ಹಾಗೂ ಭಾರತಿ ದಂಪತಿ ಪುತ್ರಿ ಈಕೆ.

ಸಮೃದ್ಧಿ ಕಡ್ಡಾಯವಾಗಿ ಕನ್ನಡ ಕಲಿಯಬೇಕೆಂಬ ಆಸೆಯನ್ನು ಹೊಂದಿರುವ ಪೋಷಕರೇ ತಮ್ಮ ಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಹಳೆಗನ್ನಡದ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಂಡು, ಅಧ್ಯಯನ ಮಾಡುವ ಜೊತೆಗೆ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅವರಂತೆ ಕನ್ನಡ ನಿರೂಪಕಿ ಆಗಬೇಕು ಎಂಬ ಆಸೆ ಹೊಂದಿದ್ದಾರೆ ಸಮೃದ್ಧಿ. ಜತೆಗೆ ನ್ಯಾಯಾಧೀಶೆ ಆಗಬೇಕೆಂಬ ಬಯಕೆಯೂ ಈಕೆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News