ಮಹಿಳೆಯರಿಗೆ ರಾಜಕೀಯ ಪ್ರಜ್ಞೆ ಮುಖ್ಯ: ಸುಬ್ರಮಣಿ ಆರ್ಮುಗಮ್

Update: 2019-12-15 17:37 GMT

ಬೆಂಗಳೂರು, ಡಿ.15: ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಬೆಳೆಯುತ್ತಿದ್ದಾರೆ.ಅದೇ ರೀತಿ, ರಾಜಕೀಯ ಕ್ಷೇತ್ರದಲ್ಲೂ ಪುರುಷರಷ್ಟೆ ಸಮಾನತೆ ಪಡೆದುಕೊಳ್ಳಲು ಜಾಗೃತರಾಗಬೇಕಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ(ಡಬ್ಲುಪಿಐ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಆರ್ಮುಗಮ್ ಹೇಳಿದರು.

ರವಿವಾರ ನಗರದ ದಾರುಸ್ಸಲಾಮ್ ಸಭಾಂಗಣದಲ್ಲಿ ಆಯೋಜಿಸಿದ್ದ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ(ಡಬ್ಲುಪಿಐ)ಯ ರಾಜ್ಯ ಘಟಕದ ಮಹಿಳಾ ವಿಭಾಗಗಕ್ಕೆ ಚಾಲನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ದುರ್ಬಲರು, ಅಬಲೆಯರು ಎಂಬ ಕಾಲ ಇದಲ್ಲ. ಪ್ರಸ್ತುತವಾಗಿ ಮಹಿಳೆಯರು ಪುರಷರ ಸಮನಾಗಿ ಬೆಳೆಯುತ್ತಿದ್ದಾರೆ. ಹೀಗಾಗಿ, ಎಲ್ಲ ಮಹಿಳೆಯರಿಗೆ ಸಮಾನ ಅವಕಾಶಗಳು ಸಿಗಬೇಕು. ಈಗಾಗಲೇ ಲಕ್ಷಾಂತರ ಮಹಿಳೆಯರು ತಮಗೆ ದೊರೆತ ಅವಕಾಶಗಳನ್ನು ಬಳಸಿಕೊಡು ಸಮರ್ಥವಾಗಿ ನಿಭಾಯಿಸಿ ಯಶಸ್ವಿ ಯಾಗಿದ್ದು, ರಾಜಕೀಯ ಕ್ಷೇತ್ರದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದರು.

ಯಾವ ಸಮಾಜದಲ್ಲಿ ಹಾಗೂ ಕುಟುಂಬಗಳು ಸೇರಿದಂತೆ ಊರಲ್ಲಿ ಮಹಿಳೆಗೆ ಗೌರವ ಸಿಗುತ್ತದೆಯೋ ಅಲ್ಲಿ ನೆಮ್ಮದಿ, ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದ ಅವರು, ಮಹಿಳೆಯರನ್ನು ಗೌರವಿಸುವಂತ, ಬಲಪಡಿಸುವಂತ, ಸಹೋದರಿಯರ ಸಮಾನ ಎಂದು ನೋಡಿಕೊಳ್ಳುವ, ಪೂಜಿಸುವ ಈ ನೆಲದಲ್ಲಿ ಮಹಿಳೆಯರ ಕೊಡುಗೆಯನ್ನು ನೆನೆಯಬೇಕಿದೆ ಎಂದು ಅವರು ಹೇಳಿದರು.

ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಮಾತನಾಡಿ, ಇತ್ತೀಚಿಗೆ ದೇಶದ ವಿವಿಧ ಕಡೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ.ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೆ, ರಾಜಕೀಯವಾಗಿ ಮಹಿಳೆಯರ ಸಂಖ್ಯೆಯಲ್ಲಿ ಅಧಿಕವಾಗಿದ್ದರೆ, ಮಾತ್ರ ಇಂತಹ ಪಿಡುಗಳಿಗೆ ಶಾಶ್ವತವಾಗಿ ಕಡಿವಾಣ ಹಾಕಬಹುದು ಎಂದು ಅಭಿಪ್ರಾಯಪಟ್ಟರು.

ಡಬ್ಲುಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್ ಮಾತನಾಡಿ, ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.50ರಷ್ಟು ಪಾಲನ್ನು ಮಹಿಳೆಯರು ಹೊಂದಿದ್ದು, ಶಾಸನ ಸಭೆಗಳಲ್ಲಿ ಅವರಿಗೆ ಶೇ.33 ಅಲ್ಲ, ಶೇ.50ರಷ್ಟು ಪಾಲು ಸಿಗಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಸೇರಿದಂತೆ ಹಲವರಿಗೆ ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಹೇಮಲತಾ ಮಹಿಷಿ, ಡಬ್ಲುಪಿಐ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ವಿಭಾಗದ ಅಧ್ಯಕ್ಷ ಅಬ್ದುಲ್ ಮಲಿಕ್, ಮಹಿಳಾ ವಿಭಾಗದ ಸಂಚಾಲಕಿ ತಲತ್ ಯಾಸ್ಮೀನ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News