ಎಚ್ಚರಿಕೆ,ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯಿಂದ ಈ ಅಪಾಯಕ್ಕೆ ಆಹ್ವಾನ!

Update: 2019-12-16 04:05 GMT

ಸ್ಮಾರ್ಟ್‌ಫೋನ್ ಇಂದು ಪ್ರಾಣವಾಯುವಿದ್ದಂತೆ. ವ್ಯಕ್ತಿ ಊಟವನ್ನಾದರೂ ಮರೆಯಬಹುದು,ಆದರೆ ತನ್ನ ಸ್ಮಾರ್ಟ್‌ಫೋನ್‌ನ್ನು ಮರೆಯುವುದಿಲ್ಲ. ತನ್ನ ಉಪಯುಕ್ತತೆಯಿಂದಾಗಿ ಸ್ಮಾರ್ಟ್‌ಫೋನ್ ಇಂದು ಪ್ರತಿಯೊಬ್ಬರ ಅಗತ್ಯವಾಗಿ ಪರಿಣಮಿಸಿದೆ. ಪ್ರಯಾಣವು ಸ್ಮಾರ್ಟ್‌ಫೋನ್‌ನಿಂದಾಗಿ ಸುಲಭವಾಗಿಬಿಟ್ಟಿದೆ. ಇದೇ ಕಾರಣದಿಂದ ರೈಲುಗಳಲ್ಲಿ,ಬಸ್ಸುಗಳಲ್ಲಿ ಜನರು ಸಮಯ ಕಳೆಯಲು/ಸದುಪಯೋಗಿಸಿಕೊಳ್ಳಲು ತಮ್ಮ ತಲೆಯನ್ನು ಬಗ್ಗಿಸಿ ಸ್ಮಾರ್ಟ್‌ಪೋನ್‌ನಲ್ಲಿ ವೀಡಿಯೊ,ಸಾಮಾಜಿಕ ಜಾಲತಾಣ ಅಥವಾ ಇ-ಪೇಪರ್‌ನಲ್ಲಿ ಮಗ್ನರಾಗಿರುವುದನ್ನು ನಾವು ನೋಡುತ್ತಿರುತ್ತೇವೆ. ದುರಂತವೆಂದರೆ ಈ ಚಾಳಿ ತಮ್ಮ ಆರೋಗ್ಯವನ್ನು ಅಪಾಯಕ್ಕೆ ಗುರಿ ಮಾಡುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತೇ ಇರುವುದಿಲ್ಲ.

ಕುತ್ತಿಗೆ ಮತ್ತು ತಲೆಗೆ ಹಾನಿಯಾಗಿರುವ ಹೆಚ್ಚಿನ ಪ್ರಕರಣಗಳಿಗೆ ಸ್ಮಾರ್ಟ್‌ಫೋನ್‌ಗಳ ಅತಿಯಾದ ಮತ್ತು ನಿರ್ಲಕ್ಷ್ಯದ ಬಳಕೆಯು ಕಾರಣವೆನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ಬೆಳಕಿಗೆ ತಂದಿದೆ. ಸ್ಮಾರ್ಟ್‌ಫೋನ್‌ನ್ನು ಬಳಸುವಾಗ ನಾವು ನಮ್ಮ ಕುತ್ತಿಗೆಯನ್ನು ಮುಂದಕ್ಕೆ ಬಗ್ಗಿಸುತ್ತೇವೆ ಮತ್ತು ಗಂಟೆಗಳ ಕಾಲ ಅದೇ ಸ್ಥಿತಿಯಲ್ಲಿ ಮುಂದುವರಿಯುತ್ತೇವೆ. ಇದು ನಮ್ಮ ಮಿದುಳು ಬಳ್ಳಿ (ಬೆನ್ನುಹುರಿ)ಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಮತ್ತು ಕುತ್ತಿಗೆಯನ್ನು ಘಾಸಿಗೊಳಿಸುತ್ತದೆ ಹಾಗೂ ತಲೆಗೆ ಹಾನಿಯನ್ನುಂಟು ಮಾಡುತ್ತದೆ.

ಶೇ.30ರಷ್ಟು ರಸ್ತೆ ಅಪಘಾತಗಳಿಗೆ ಜನರು ವಾಹನವನ್ನು ಚಲಾಯಿಸುತ್ತಿರುವಾಗ ಅಥವಾ ರಸ್ತೆಗಳಲ್ಲಿ ನಡೆದು ಹೋಗುತ್ತಿರುವಾಗ ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದು ಕಾರಣವಾಗಿದೆ ಎನ್ನುವುದೂ ಸಂಶೋಧನೆಯಲ್ಲಿ ಕಂಡು ಬಂದಿದೆ. ಸ್ಮಾರ್ಟ್‌ಫೋನ್ ಹುಚ್ಚು ಅಪಾಯಕಾರಿಯಾಗಿದ್ದು,ತಮ್ಮ ಕೆಲಸಕಾರ್ಯಗಳಲ್ಲಿ ಅನ್ಯಮನಸ್ಕರಾಗಿ ಜನರು ದೈಹಿಕವಾಗಿ ಗಾಯಗೊಳ್ಳುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದರೊಂದಿಗೆ ಆಂತರಿಕ ಗಾಯಗಳನ್ನೂ ಜನರು ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಖ್ಯಾತ ವಾಹನ ತಯಾರಿಕೆ ಸಂಸ್ಥೆ ಫೋರ್ಡ್ ಕಂಪನಿಯು ಫ್ರಾನ್ಸ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.60ರಷ್ಟು ಜನರು ತಾವು ರಸ್ತೆಗಳನ್ನು ದಾಟುವಾಗಲೂ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿರುತ್ತೇವೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

ಇಂತಹ ಅತ್ಯಂತ ಹೆಚ್ಚಿನ ಘಟನೆಗಳು ನಡೆದಿದ್ದು 2007ರಲ್ಲಿ ಮೊದಲ ಐಫೋನ್ ಬಿಡುಗಡೆಯ ಬಳಿಕ ಮತ್ತು 2016ರಲ್ಲಿ ಪೋಕಮನ್ ಗೋ ಗೇಮ್ ಮೊಬೈಲ್‌ಗಳಲ್ಲಿ ಆರಂಭವಾದಾಗ ಎನ್ನುವುದನ್ನೂ ಅಧ್ಯಯನವು ಬಹಿರಂಗಗೊಳಿಸಿದೆ. ಸ್ಮಾರ್ಟ್‌ಫೋನ್ ಬಳಕೆಯ ಅಪಾಯಗಳು ಹಾಗೂ ವಾಹನ ಚಾಲನೆ ಮತ್ತು ನಡಿಗೆ ಸೇರಿದಂತೆ ತಮ್ಮ ಚಟುವಟಿಕೆಗಳ ವೇಳೆ ಸ್ಮಾರ್ಟ್‌ಫೋನ್ ಬಳಕೆಯ ಹುಚ್ಚಿನ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಅಗತ್ಯವಿದೆ ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಮಾರ್ಟ್‌ಫೋನ್ ಹುಚ್ಚು ನಿಜಕ್ಕೂ ಅತ್ಯಂತ ಅಪಾಯಕಾರಿಯಾಗಿದೆ. ಇಂದು ಸಣ್ಣಮಕ್ಕಳೂ ಸ್ಮಾರ್ಟ್‌ಫೋನ್‌ಗಳ ಗೀಳಿಗೆ ಗುರಿಯಾಗಿದ್ದಾರೆ,ಅವರ ನರಗಳು ಮತ್ತು ಮೂಳೆಗಳು ಇನ್ನೂ ಬೆಳವಣಿಗೆಯ ಹಂತದಲ್ಲಿದ್ದು ಮೃದುವಾಗಿರು ವುದರಿಂದ ಅವರು ಕುತ್ತಿಗೆ ಮತ್ತು ತಲೆಗೆ ಘಾಸಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ತಮ್ಮ ಮಕ್ಕಳ ಡಿಜಿಟಲ್ ಸಾಧನಗಳ ಬಳಕೆಗೆ ಹೆತ್ತವರು ಕಡಿವಾಣ ಹಾಕುವುದು ಬಹಳ ಮುಖ್ಯವಾಗಿದೆ. ಹೆತ್ತವರು ಮಕ್ಕಳ ಎದುರು ಫೋನ್‌ಗಳ ಬಳಕೆಯನ್ನು ನಿಲ್ಲಿಸಿದರೆ ಮಕ್ಕಳ ಹಿತದೃಷ್ಟಿಯಿಂದ ಅದರಷ್ಟು ಒಳ್ಳೆಯ ಕೆಲಸ ಬೇರೊಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News