ಮೊದಲ ಟೆಸ್ಟ್: ಆಸ್ಟ್ರೇಲಿಯಕ್ಕೆ ಭರ್ಜರಿ ಜಯ

Update: 2019-12-16 05:18 GMT

ಪರ್ತ್, ಡಿ.15: ನ್ಯೂಝಿಲ್ಯಾಂಡ್ ವಿರುದ್ಧ ಆಸ್ಟ್ರೇಲಿಯ ತಂಡ ಪ್ರಥಮ ಟೆಸ್ಟ್‌ನಲ್ಲಿ 296 ರನ್‌ಗಳ ಅಂತರದಿಂದ ಭರ್ಜರಿ ಜಯ ಗಳಿಸಿದೆ.

   ಪರ್ತ್ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್‌ನ ನಾಲ್ಕನೇ ದಿನವಾದ ರವಿವಾರ ಗೆಲುವಿಗೆ 2ನೇ ಇನಿಂಗ್ಸ್ ನಲ್ಲಿ 468 ರನ್ ಗಳಿಸಬೇಕಿದ್ದ ನ್ಯೂಝಿಲ್ಯಾಡ್ ತಂಡ 65.3 ಓವರ್‌ಗಳಲ್ಲಿ 171 ರನ್‌ಗಳಿಗೆ ಆಲೌಟಾಗಿದೆ. ಇದರೊಂದಿಗೆ ನ್ಯೂಝಿಲ್ಯಾಂಡ್ ವಿರುದ್ಧ ಆಸ್ಟ್ರೇಲಿಯ ದೊಡ್ಡ ಗೆಲುವು ದಾಖಲಿಸಿದೆ. ಆಕ್ಲೆಂಡ್‌ನಲ್ಲಿ 1974ರಲ್ಲಿ ಆಸ್ಟ್ರೇಲಿಯ 297 ರನ್‌ಗಳ ಜಯ ಗಳಿಸಿತ್ತು. ಆ ಬಳಿಕ ನ್ಯೂಝಿಲ್ಯಾಂಡ್ ವಿರುದ್ಧ ಇದೇ ಮೊದಲ ಬಾರಿ ಪ್ರಚಂಡ ಜಯ ದಾಖಲಿಸಿದೆ. ಮೊದಲ ಇನಿಂಗ್ಸ್‌ನಲ್ಲಿ 250 ರನ್‌ಗಳ ಹಿನ್ನಡೆ ಅನುಭವಿಸಿದ್ದ ನ್ಯೂಝಿಲ್ಯಾಂಡ್ ತಂಡ ಎರಡನೇ ಇನಿಂಗ್ಸ್ ನಲ್ಲಿ ಗೆಲುವಿಗೆ 468 ರನ್‌ಗಳ ಕಠಿಣ ಸವಾಲು ಪಡೆದಿತ್ತು. ಆದರೆ ಎರಡು ದಿನಗಳ ಅವಕಾಶ ಇದ್ದರೂ ನ್ಯೂಝಿಲ್ಯಾಂಡ್‌ನ ಆಟಗಾರರು ಒತ್ತಡಕ್ಕೆ ಒಳಗಾಗಿ ಬೇಗನೆ ಇನಿಂಗ್ಸ್ ಮುಗಿಸಿದರು. ಟೆಸ್ಟ್‌ನ ಮೂರನೇ ದಿನ ಆಸ್ಟ್ರೇಲಿಯ ಎರಡನೇ ಇನಿಂಗ್ಸ್ ನಲ್ಲಿ 57 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 167 ರನ್ ಗಳಿಸಿತ್ತು. ಇಂದು ಬ್ಯಾಟಿಂಗ್ ಮುಂದುವರಿಸಿ 69.1 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 217 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ನ್ಯೂಝಿಲ್ಯಾಂಡ್ ಎರಡನೇ ಇನಿಂಗ್ಸ್‌ನಲ್ಲಿ ಮಿಚೆಲ್ ಸ್ಟಾರ್ಕ್(45ಕ್ಕೆ 4), ನಥಾನ್ ಲಿಯೊನ್(63ಕ್ಕೆ 4) ಮತ್ತು ಪ್ಯಾಟ್ ಕಮಿನ್ಸ್(31ಕ್ಕೆ 2) ದಾಳಿಗೆ ತತ್ತರಿಸಿತು. ಬಿ.ಜೆ.ವಾಟ್ಲಿಂಗ್(40) ಮತ್ತು ಗ್ರಾಂಡ್‌ಹೋಮ್(33) ಇವರನ್ನು ಹೊರತುಪಡಿಸಿದರೆ ನ್ಯೂಝಿಲ್ಯಾಂಡ್‌ನ ಇತರ ಆಟಗಾರರ ಬ್ಯಾಟಿಂಗ್ ಕಳಪೆಯಾಗಿತ್ತು. ಲಥಾಮ್(18), ನಾಯಕ ಕೇನ್ ವಿಲಿಯಮ್ಸನ್(14), ರಾಸ್ ಟೇಲರ್(22), ನಿಕೊಲ್ಸ್(21) ಎರಡಂಕೆಯ ಕೊಡುಗೆ ನೀಡಿದರು. ಕೊನೆಯ ಐದು ವಿಕೆಟ್‌ಗಳು 17 ರನ್‌ಗಳಿಗೆ ಪತನಗೊಂಡವು. ಎರಡು ಇನಿಂಗ್ಸ್‌ಗಳಲ್ಲಿ ಒಟ್ಟು 9 ವಿಕೆಟ್‌ಗಳನ್ನು ಪಡೆದ ಮಿಚೆಲ್ ಸ್ಟಾರ್ಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರ್

► ಆಸ್ಟ್ರೇಲಿಯ ಮೊದಲ ಇನಿಂಗ್ಸ್: 416, ನ್ಯೂಝಿಲ್ಯಾಂಡ್ ಮೊದಲ ಇನಿಂಗ್ಸ್: 166, ಆಸ್ಟ್ರೇಲಿಯ ಎರಡನೇ ಇನಿಂಗ್ಸ್: 69.1 ಓವರ್‌ಗಳಲ್ಲಿ 217/9 ಡಿಕ್ಲೇರ್( ಬರ್ನ್ಸ್ 53, ಲಾಬುಶೆನ್ 50; ಸೌಥಿ 69ಕ್ಕೆ 50)

► ನ್ಯೂಝಿಲ್ಯಾಂಡ್ ಎರಡನೇ ಇನಿಂಗ್ಸ್: 65.3 ಓವರ್‌ಗಳಲ್ಲಿ ಆಲೌಟ್ 171(ವಾಟ್ಲಿಂಗ್ 40, ಗ್ರಾಂಡ್‌ಹೋಮ್ 33; ಸ್ಟಾರ್ಕ್ 45ಕ್ಕೆ 4, ಲಿಯೊನ್ 63ಕ್ಕೆ 4)

► ಪಂದ್ಯಶ್ರೇಷ್ಠ: ಮಿಚೆಲ್ ಸ್ಟಾರ್ಕ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News