ಹತ್ತು ವರ್ಷಗಳ ಬಳಿಕ ಸ್ವದೇಶದಲ್ಲಿ ಆಡಿದ ಮೊದಲ ಟೆಸ್ಟ್ ಪಂದ್ಯ ಡ್ರಾಗೊಳಿಸಿದ ಪಾಕಿಸ್ತಾನ

Update: 2019-12-16 05:44 GMT

 ರಾವಲ್ಪಿಂಡಿ, ಡಿ.15: ಹತ್ತು ವರ್ಷಗಳ ಬಳಿಕ ಸ್ವದೇಶದಲ್ಲಿ ಶ್ರೀಲಂಕಾ ವಿರುದ್ಧ ಆಡಿದ ಮಳೆಬಾಧಿತ ಮೊದಲ ಟೆಸ್ಟ್ ಪಂದ್ಯವನ್ನು ಪಾಕಿಸ್ತಾನ ಡ್ರಾಗೊಳಿಸಿದೆ. 2009ರಲ್ಲಿ ಶ್ರೀಲಂಕಾ ವಿರುದ್ಧವೇ ಕೊನೆಯ ಬಾರಿ ತನ್ನ ನೆಲದಲ್ಲಿ ಟೆಸ್ಟ್ ಪಂದ್ಯದಲ್ಲಿ ಪಾಕ್ ಆಡಿತ್ತು. ಲಾಹೋರ್‌ನಲ್ಲಿ 2009ರಲ್ಲಿ ಲಂಕಾ ಆಟಗಾರರ ಮೇಲೆ ಉಗ್ರರ ದಾಳಿ ನಡೆದ ಬಳಿಕ ಪಾಕ್ ತನ್ನ ನೆಲದಲ್ಲಿ ಟೆಸ್ಟ್ ಪಂದ್ಯದ ಆತಿಥ್ಯವಹಿಸಿಲ್ಲ.

 ಐದನೇ ಹಾಗೂ ಅಂತಿಮ ದಿನವಾದ ರವಿವಾರ 6 ವಿಕೆಟ್‌ಗಳ ನಷ್ಟಕ್ಕೆ 282 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಶ್ರೀಲಂಕಾ 6 ವಿಕೆಟ್‌ಗೆ 308 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

 ಶ್ರೀಲಂಕಾದ ಮೊದಲ ಇನಿಂಗ್ಸ್‌ಗೆ ಉತ್ತರವಾಗಿ ಪಾಕಿಸ್ತಾನ 2 ವಿಕೆಟ್‌ಗಳ ನಷ್ಟಕ್ಕೆ 252 ರನ್ ಗಳಿಸಿತು. ಅಬಿದ್ ಔಟಾಗದೆ 109(201 ಎಸೆತ, 11 ಬೌಂಡರಿ) ಹಾಗೂ ಬಾಬರ್ ಆಝಂ ಔಟಾಗದೆ 102 ರನ್(128 ಎಸೆತ, 14 ಬೌಂಡರಿ) ಗಳಿಸಿದರು. ಪಾಕ್ 3 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆಗ ನಾಯಕ ಅಝರ್ ಅಲಿ(36)ಹಾಗೂ ಅಬಿದ್ ಅಲಿ 2ನೇ ವಿಕೆಟ್ ಜೊತೆಯಾಟದಲ್ಲಿ 87 ರನ್ ಸೇರಿಸಿದರು. ಅಝರ್ ಔಟಾದ ಬಳಿಕ ಆಝಂರೊಂದಿಗೆ ಕೈ ಜೋಡಿಸಿದ ಅಲಿ 3ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 162 ರನ್ ಕಲೆ ಹಾಕಿ ಪಂದ್ಯ ಡ್ರಾನಲ್ಲಿ ಕೊನೆಗೊಳ್ಳಲು ನೆರವಾದರು. ಅಬಿದ್ ಅಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಇದಕ್ಕೂ ಮೊದಲು 6 ವಿಕೆಟ್‌ಗೆ 282 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಲಂಕಾ 26 ರನ್ ಸೇರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ಡಿ’ಸಿಲ್ವಾ ಕೊನೆಗೂ ಶತಕ ಪೂರೈಸಿದರು. 87 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಡಿ’ಸಿಲ್ವಾ ಔಟಾಗದೆ 102 ರನ್(166 ಎಸೆತ, 15 ಬೌಂಡರಿ)ಗಳಿಸಿದರು. ಪೆರೇರ ಔಟಾಗದೆ 16 ರನ್ ಗಳಿಸಿದರು. ಶ್ರೀಲಂಕಾ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಮೊದಲ ದಿನದಾಟ ಮಂದ ಬೆಳಕಿನಿಂದಾಗಿ ಬೇಗನೆ ಕೊನೆಗೊಂಡಾಗ 68.1 ಓವರ್‌ಗಳ ಪಂದ್ಯ ನಡೆದಿತ್ತು. 2ನೇ ದಿನ 18.2 ಓವರ್ ಹಾಗೂ 3ನೇ ದಿನ 5.2 ಓವರ್‌ಗಳ ಪಂದ್ಯ ನಡೆದಿತ್ತು. ಆದರೆ, ನಾಲ್ಕನೇ ದಿನವಾದ ಶನಿವಾರ ಒಂದೂ ಎಸೆತ ಕಾಣದೆ ಪಂದ್ಯ ರದ್ದಾಗಿತ್ತು.

ಎರಡನೇ ಟೆಸ್ಟ್ ಪಂದ್ಯ ಡಿ.19ರಿಂದ ಕರಾಚಿಯಲ್ಲಿ ಆರಂಭವಾಗಲಿದೆ.

ರಾವಲ್ಪಿಂಡಿಯಲ್ಲಿ 14 ವರ್ಷಗಳ ಬಳಿಕ ಶತಕಗಳ ಸುರಿಮಳೆ

 2004ರಲ್ಲಿ ‘ಮಹಾಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ ಶತಕ ಸಿಡಿಸಿದ ಬಳಿಕ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿರುವ ಟೆಸ್ಟ್ ಶತಕ ಗೌರವ ಫಲಕದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಇದೀಗ ಒಂದೇ ದಿನ ಮೂರು ಹೊಸ ಹೆಸರು ಈ ಫಲಕಕ್ಕೆ ಸೇರ್ಪಡೆಯಾಗಿದೆ. ಧನಂಜಯ ಡಿ’ಸಿಲ್ವಾ ಲಂಕಾದ ಪರ ರಾವಲ್ಪಿಂಡಿಯಲ್ಲಿ ಟೆಸ್ಟ್ ಶತಕ ಸಿಡಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಹಿಂದೆ ಅರವಿಂದ ಡಿ’ಸಿಲ್ವಾ ಈ ಸಾಧನೆ ಮಾಡಿದ್ದರು. ಅಬಿದ್ ಅಲಿ ಹಾಗೂ ಬಾಬರ್ ಆಝಂ ಶತಕ ಸಿಡಿಸಿದ್ದು, ಈ ಮೂಲಕ ರಾವಲ್ಪಿಂಡಿ ಸ್ಟೇಡಿಯಂನಲ್ಲಿ ಶತಕ ಸಿಡಿಸಿದವರ ಸಂಖ್ಯೆ 17ಕ್ಕೇರಿದೆ.

ಸಂಕ್ಷಿಪ್ತ ಸ್ಕೋರ್

► ಶ್ರೀಲಂಕಾ ಮೊದಲ ಇನಿಂಗ್ಸ್: 308/6 ಡಿಕ್ಲೇರ್

(ಧನಂಜಯ ಡಿ’ಸಿಲ್ವಾ ಔಟಾಗದೆ 102, ಕರುಣರತ್ನೆ 59,ಫೆರ್ನಾಂಡೊ 40, ಡಿಕ್ವೆಲ್ಲಾ 33, ಮ್ಯಾಥ್ಯೂಸ್ 31, ಶಾಹೀನ್ ಅಫ್ರಿದಿ 2-58, ನಸೀಂ ಶಾ 2-92)

►ಪಾಕಿಸ್ತಾನ ಮೊದಲ ಇನಿಂಗ್ಸ್: 252/2

(ಅಬಿದ್ ಅಲಿ ಔಟಾಗದೆ 109, ಬಾಬರ್ ಆಝಂ ಔಟಾಗದೆ 102, ರಜಿತ 1-5, ಕುಮಾರ 1-46)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News